ಪುತ್ತೂರು: ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ 14 ಹಾಗೂ 17 ವರ್ಷ ವಯೋಮಿತಿಯ ಬಾಲಕ-ಬಾಲಕಿಯರ ಹ್ಯಾಂಡ್‌ಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಪಾಂಗ್ಳಾಯಿಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 14 ವರ್ಷ ವಯೋಮಾನದ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ಮಂಡ್ಯ ಉಪನಿರ್ದೇಶಕರ ಕಚೇರಿ, ಮಂಡ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪಂದ್ಯಾಟ ಆಯೋಜಿಸಲಾಗಿತ್ತು.ಬೆಥನಿ ಶಾಲೆಯ ತಂಡವು ಸರಣಿ ಪಂದ್ಯಗಳಲ್ಲಿ ಅತ್ಯುತ್ತಮ ಕ್ರೀಡಾ ಕೌಶಲ್ಯ ಹಾಗೂ ಸಾಂಘಿಕ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಗಳಿಸಿದೆ. ಶಾಲಾ ಪ್ರಾಂಶುಪಾಲೆ ಭಗಿನಿ ಅನಿತಾ ಟ್ರೆಸ್ಸಿ ಅವರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ನಿರಂಜನ್ ಹಾಗೂ ಅಕ್ಷಯ್ ಅವರ ತರಬೇತಿಯೊಂದಿಗೆ ತಂಡ ಸ್ಪರ್ಧಿಸಿತ್ತು.ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರು ಹಾಗೂ ತರಬೇತುದಾರರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದ, ರಕ್ಷಕ-ಶಿಕ್ಷಕ ಸಂಘ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ











