ಪುತ್ತೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಅಂತಿಮ ಪಟ್ಟಿಯಲ್ಲಿ 1,00,703 ಪುರುಷರು ಹಾಗೂ 1,03,478 ಮಹಿಳೆಯರು ಸೇರಿದಂತೆ ಒಟ್ಟು 2,04,181 ಮತದಾರರಿದ್ದಾರೆ. ಪುರುಷರಿಗಿಂತ 2,775 ಮಹಿಳಾ ಮತದಾರರು ಹೆಚ್ಚಿದ್ದಾರೆ.ಪರಿಷ್ಕರಣೆಗೆ ಮೊದಲು ಕ್ಷೇತ್ರದಲ್ಲಿ 2,16,542 ಮತದಾರರಿದ್ದರು. ಪರಿಷ್ಕರಣೆ ವೇಳೆ 1,038 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಎರಡನೇ ಹಂತದಲ್ಲಿ ನಮೂನೆ-6ರ ಮೂಲಕ 3,645 ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ.ಮನೆಮನೆ ಸಮೀಕ್ಷೆಯಲ್ಲಿ ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ದ್ವಿಪ್ರತಿ ನೋಂದಣಿ ಹೊಂದಿದವರು ಸೇರಿದಂತೆ ವಿವಿಧ ವರ್ಗದ ಮತದಾರರನ್ನು ಗುರುತಿಸಲಾಗಿತ್ತು. ಒಟ್ಟು 12,330 ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದ್ದು, 12,060 ಮಂದಿ ಅರ್ಹರೆಂದು ದೃಢಪಟ್ಟಿದ್ದಾರೆ. 270 ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ.ಅಂತಿಮ ಪಟ್ಟಿಯಲ್ಲಿ 18ರಿಂದ 19 ವರ್ಷ ವಯಸ್ಸಿನ 3,027 ಮತದಾರರು, 2,067 ಅಂಗವಿಕಲ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 1,533 ಮತದಾರರಿದ್ದಾರೆ.ಮತಗಟ್ಟೆಗಳ ಸಂಖ್ಯೆ 245ಕ್ಕೆ ಏರಿಕೆ: ಎಸ್‌ಐಆರ್‌ಗೂ ಮೊದಲು ಕ್ಷೇತ್ರದಲ್ಲಿ 221 ಮತಗಟ್ಟೆಗಳಿದ್ದವು. 1,200ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ವಿಭಜಿಸಿ 24 ಹೊಸ ಮತಗಟ್ಟೆಗಳನ್ನು ರಚಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 245ಕ್ಕೆ ಏರಿಕೆಯಾಗಿದೆ.ಅಂತಿಮ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹರು ನಮೂನೆ-6, ಹೆಸರು ತೆಗೆದುಹಾಕಲು ನಮೂನೆ-7 ಹಾಗೂ ವಿವರಗಳ ತಿದ್ದುಪಡಿಗೆ ನಮೂನೆ-8ರ ಮೂಲಕ ಅರ್ಜಿ ಸಲ್ಲಿಸಬಹುದು. ಮತದಾರರು ತಮ್ಮ ಹೆಸರುಗಳನ್ನು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅಥವಾ https://voters.eci.gov.in ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು.









