ಪುತ್ತೂರು: ಪುತ್ತೂರು ದೀಪೋತ್ಸವ ಸಮಿತಿ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಡಿ. 8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ‘ಪುತ್ತೂರು ದೀಪೋತ್ಸವ-2026’ ಕಾರ್ಯಕ್ರಮದ ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.ದೀಪ ಪ್ರಜ್ವಲಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, “ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ನಡೆಸುವ ದೀಪೋತ್ಸವವು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ. ಮಹಾಲಿಂಗೇಶ್ವರನ ಸಾನಿಧ್ಯದಲ್ಲಿ ಸುಮಾರು 10 ಸಾವಿರ ಮಹಿಳೆಯರು ಒಟ್ಟಾಗಿ ದೀಪ ಬೆಳಗಿಸಬೇಕು. ಕರಾವಳಿಯಲ್ಲಿ ಈವರೆಗೆ ನಡೆಯದ ವಿಶಿಷ್ಟ ಕಾರ್ಯಕ್ರಮವಾಗಿ ದೀಪೋತ್ಸವ ಮೂಡಿಬರಬೇಕು” ಎಂದರು.ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ನೆಮ್ಮದಿಯ ವಾತಾವರಣ ಕಲ್ಪಿಸುವುದು ಮುಖ್ಯ. ರಾತ್ರಿ ವೇಳೆಯೂ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೀಪೋತ್ಸವ ಸಮಿತಿ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ ಮಾತನಾಡಿ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಪೂರ್ವವೆನಿಸುವ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸುಮಾರು ₹15ರಿಂದ ₹18 ಲಕ್ಷ ವೆಚ್ಚದ ಅಂದಾಜು ಮಾಡಲಾಗಿದ್ದು, ನಗರದ ಮೂರು ಕಡೆಗಳಲ್ಲಿ ಸ್ವಾಗತ ದ್ವಾರ ನಿರ್ಮಿಸುವುದು, ಪೇಟೆಯನ್ನು ಅಲಂಕರಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ಬಾಲ್ಯೊಟ್ಟು ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಖ್ಯಾತ ಎಲುಬು ತಜ್ಞ ಡಾ. ಅಜಯ್ ಅವರು ದೀಪೋತ್ಸವದ ಲೋಗೋ ಬಿಡುಗಡೆ ಮಾಡಿದರು. ಶಶಿಕುಮಾರ್ ಬಾಲ್ಯೊಟ್ಟು ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ಪುತ್ತೂರು ದೀಪೋತ್ಸವ ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು, ಪ್ರಧಾನ ಕಾರ್ಯದರ್ಶಿ ಡಾ. ರವೀಶ್ ಪಡುಮಲೆ, ಕೋಶಾಧಿಕಾರಿ ದಾಮೋಧರ ಪಾಟಾಳಿ, ಸಮಿತಿ ಸಂಚಾಲಕ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಸಹ ಕಾರ್ಯದರ್ಶಿ ಜಯಪ್ರಕಾಶ್ ರೈ ಚೆಲ್ಯಡ್ಕ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ಒಳತ್ತಡ್ಕ, ದೀಪೋತ್ಸವ ಸಮಿತಿ ಗೌರವಾಧ್ಯಕ್ಷ ಜಿ.ಎಲ್. ಬಲರಾಮ್ ಆಚಾರ್ಯ, ಮಹಿಳಾ ಗೌರವ ಸಲಹೆಗಾರ್ತಿ ಗೌರಿ ಬನ್ನೂರು, ರಾಮದಾಸ್ ಗೌಡ, ಪದ್ಮನಾಭ ಶೆಟ್ಟಿ, ಭಾಸ್ಕರ ಬಾರ್ಯ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಲ್ಲಾಸ್ ಕೋಟ್ಯಾನ್, ನೊಣಾಲು ಜಯರಾಜ್ ರೈ, ಜಗಜೀವನ್ ದಾಸ್ ರೈ, ಕೃಷ್ಣವೇಣಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.









