ಬಂಟ್ವಾಳ: ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಸಿಲುಕಿ ಉಸಿರುಗಟ್ಟಿದ ಪರಿಣಾಮ 9 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ಸಮೀಪ ಅ.25ರ ರಾತ್ರಿ ನಡೆದಿದೆ.ಮೃತ ಬಾಲಕನನ್ನು ಆನಂದ ಪೂಜಾರಿ ಅವರ ಪುತ್ರ ಅಮೃತ್ ಎ. ಪೂಜಾರಿ (9) ಎಂದು ಗುರುತಿಸಲಾಗಿದೆ.ಅ.25ರ ರಾತ್ರಿ ಅಮೃತ್ ಮನೆಯ ಎದುರಿನ ಹಾಲ್‌ನಲ್ಲಿ ಒಬ್ಬನೇ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮನೆಯ ಕಿಟಕಿಗೆ ಮೊದಲೇ ಸಿಕ್ಕಿಸಲಾಗಿದ್ದ ಹಗ್ಗ ಆಕಸ್ಮಿಕವಾಗಿ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ. ಪರಿಣಾಮ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಕೂಡಲೇ ಬಾಲಕನಿಗೆ ಉಪಚರಿಸಲಾಯಿತಾದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 27/2026ರಂತೆ ಬಿಎನ್‌ಎಸ್‌ಎಸ್ ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









