ಪುತ್ತೂರು: ನವವಿವಾಹಿತೆಯೊಬ್ಬರು ವಿಷ ಸೇವಿಸಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ನರಿಮೊಗರು ವ್ಯಾಪ್ತಿಯ ವೀರಮಂಗಲದಲ್ಲಿ ನಡೆದಿದೆ. ಈ ಸಂಬಂಧ ಪತಿಯ ಸಹೋದರ ಹಾಗೂ ಸಹೋದರಿಯ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವೀರಮಂಗಲ ನಿವಾಸಿ ಸುಂದರ ಅವರ ಪತ್ನಿ ಮಮತಾ (32) ಮೃತಪಟ್ಟವರು. ಕೆಲ ತಿಂಗಳ ಹಿಂದಷ್ಟೇ ಸುಂದರ ಮತ್ತು ಮಮತಾ ವಿವಾಹವಾಗಿದ್ದರು.ಮಮತಾ ಅವರು ಶನಿವಾರ ಹುಲ್ಲು ನಾಶಪಡಿಸಲು ಬಳಸುವ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.‘ನೀನು ವಿವಾಹವಾಗಿ ಬಂದ ಬಳಿಕ ನಮ್ಮ ಮನೆಯಲ್ಲಿ ಅಶುಭ ಘಟನೆಗಳೇ ನಡೆಯುತ್ತಿವೆ’ ಎಂದು ಪತಿಯ ಸಹೋದರ ಉಮೇಶ ಹಾಗೂ ಸಹೋದರಿ ವಸಂತಿ ನಿರಂತರವಾಗಿ ಗಲಾಟೆ ಮಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಮಮತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹೇಳಿಕೆ ನೀಡಿದ್ದರು ಎನ್ನಲಾಗಿದೆ.ಈ ಹೇಳಿಕೆಯ ಆಧಾರದಲ್ಲಿ ಉಮೇಶ ಮತ್ತು ವಸಂತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.









