ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 452 ಅತಿಥಿ ಉಪನ್ಯಾಸಕರ ಪಿಎಚ್‌ಡಿ ವಿದ್ಯಾರ್ಹತೆಯ ಸತ್ಯಾಸತ್ಯತೆ ಪರಿಶೀಲಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಯುಜಿಸಿ ನಿಯಮಾವಳಿಗಳಂತೆ ಪಿಎಚ್‌ಡಿ ಅರ್ಹತೆ ಹೊಂದಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಉಪನ್ಯಾಸಕರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿದೆ.2025-26ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಈ ಅಭ್ಯರ್ಥಿಗಳು ಅರ್ಜಿಯಲ್ಲಿ ಪಿಎಚ್‌ಡಿ ವಿದ್ಯಾರ್ಹತೆ ಹೊಂದಿರುವುದಾಗಿ ನಮೂದಿಸಿದ್ದರು. ಆದರೆ 2026-27ನೇ ಸಾಲಿನ ನೇಮಕಾತಿಗಾಗಿ ನಡೆದ ಆನ್‌ಲೈನ್ ಅರ್ಜಿ ಪರಿಶೀಲನೆ ವೇಳೆ ಇದೇ ಅಭ್ಯರ್ಥಿಗಳು ಪಿಎಚ್‌ಡಿ ಅರ್ಹತೆಯನ್ನು ಕ್ಲೇಮ್ ಮಾಡದೇ ಇರುವುದು ಗಮನಕ್ಕೆ ಬಂದಿದೆ. ಈ ವ್ಯತ್ಯಾಸದಿಂದ ಅನುಮಾನ ಮೂಡಿದ್ದು, ದಾಖಲೆಗಳ ಪರಿಶೀಲನೆಗೆ ಇಲಾಖೆ ಮುಂದಾಗಿದೆ.ನೋಟಿಸ್ ಪಡೆದ 452 ಉಪನ್ಯಾಸಕರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕ ಭಾಗದವರಾಗಿದ್ದಾರೆ. ಕಲಬುರಗಿ, ಅಥಣಿ, ಜಮಖಂಡಿ, ಸೇಡಂ, ಯಾದಗಿರಿ, ಬೀದರ್, ಹುಬ್ಬಳ್ಳಿ ಹಾಗೂ ರಾಯಚೂರು ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರು ಪೂರ್ವ, ವಿಜಯನಗರ ಹಾಗೂ ಯಲಹಂಕ ಭಾಗದ ಕಾಲೇಜುಗಳ ಉಪನ್ಯಾಸಕರಿಗೂ ನೋಟಿಸ್ ನೀಡಲಾಗಿದೆ.ನೋಟಿಸ್ ತಲುಪಿದ 7 ದಿನಗಳೊಳಗೆ ಸಂಬಂಧಪಟ್ಟ ಪ್ರಾಂಶುಪಾಲರು ಉಪನ್ಯಾಸಕರಿಂದ ಲಿಖಿತ ಹೇಳಿಕೆ ಹಾಗೂ ಪಿಎಚ್‌ಡಿ ವಿದ್ಯಾರ್ಹತೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಪಡೆದು ಇಲಾಖೆಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ದಾಖಲೆಗಳ ಪರಿಶೀಲನೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!