ವಿಟ್ಲ: ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆಯಲಿರುವ ಸಿಂಹಮಾಸದ ವಿಶೇಷ ಪೂಜೆಯ ಪ್ರಯುಕ್ತ ‘ವೈಷ್ಣವೀ ರಜತ ನೃತ್ಯಾಂತರ್ಯಾನ’ದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಸೆ.17ರಂದು ಸಂಜೆ 4.45ಕ್ಕೆ ಆಯೋಜಿಸಲಾಗಿದೆ.ಕಾರ್ಯಕ್ರಮದ ದೀಪ ಪ್ರಜ್ವಲನೆಗೆ ಮುಳಿಯ ಸಮೂಹ ಸಂಸ್ಥೆಗಳ ಚೇರ್ಮನ್ ಹಾಗೂ ಗೌರವಾಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಚಾಲನೆ ನೀಡಲಿದ್ದು, ಶ್ರೀ ಭಗವತಿ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ. ಅಧ್ಯಕ್ಷತೆ ವಹಿಸಲಿದ್ದಾರೆ.ಉದ್ಯಮಿ ಸುಭಾಷ್ ಚಂದ್ರ ನಾಯಕ್, ವಿಟ್ಲ ಹಾಗೂ ಗಾನಗಂಧರ್ವ ಸಂಗೀತ ಶಾಲೆಯ ವಿದುಷಿ ಪಾರ್ವತಿ ಗಣೇಶ ಭಟ್, ಹೊಸಮೂಲೆ ಸೇರಿದಂತೆ ಗಣ್ಯರು ಉಪಸ್ಥಿತರಿರುವರು.ಕಾರ್ಯಕ್ರಮದ ಅಂಗವಾಗಿ ಸಂಜೆ 6 ಗಂಟೆಯಿಂದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ನಟುವಾಂಗ, ಹಾಡುಗಾರಿಕೆ, ಮೃದಂಗ ಹಾಗೂ ಕೊಳಲು ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಸಂಗೀತ ಮತ್ತು ನೃತ್ಯ ಪ್ರದರ್ಶನಗಳು ನಡೆಯಲಿವೆ.ವಿದ್ಯಾರ್ಥಿಗಳು, ಕಲಾವಿದರು ಹಾಗೂ ನೃತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.











