ಪುತ್ತೂರು: ಕಳೆದ 21 ವರ್ಷಗಳ ಹಿಂದೆ ನಷ್ಟದಲ್ಲಿದ್ದು ಅತಂತ್ರ ಸ್ಥಿತಿಯಲ್ಲಿದ್ದ ಬನ್ನೂರು ರೈತರ ಸೇವಾ ಸಹಕಾರಿ ಸಂಘವು ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಇಂದು ಉತ್ತಮವಾಗಿ ಅಭಿವೃದ್ಧಿ ಹೊಂದಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಡಳಿತ ಮಂಡಳಿಯಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳಿದ್ದರೂ ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಸದಸ್ಯರ ಸಹಕಾರದಿಂದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಯುತ್ತಿದ್ದು, ಇದರಿಂದ ಚುನಾವಣೆಗೆ ಖರ್ಚಾಗುವ ಸುಮಾರು ₹8 ಲಕ್ಷ ಉಳಿತಾಯವಾಗುತ್ತಿದೆ ಎಂದರು.ವರದಿ ವರ್ಷದಲ್ಲಿ ಸಂಘದಲ್ಲಿ 6,825 ‘ಎ’ ಗ್ರೇಡ್ ಸದಸ್ಯರಿದ್ದು, ₹5.79 ಕೋಟಿ ಪಾಲು ಬಂಡವಾಳ ಹೊಂದಿದೆ. ಇದನ್ನು ₹6 ಕೋಟಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಸಂಘದಲ್ಲಿ ₹29.61 ಕೋಟಿ ಠೇವಣಿ ಇದ್ದು, ಮುಂದಿನ ಅವಧಿಯಲ್ಲಿ ₹32 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಇಡಲಾಗಿದೆ. ಸದಸ್ಯರಿಗೆ ₹55.31 ಕೋಟಿ ಸಾಲ ನೀಡಲಾಗಿದ್ದು, ಮುಂದಿನ ಸಾಲಿನಲ್ಲಿ ₹60 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ.ವರದಿ ವರ್ಷದಲ್ಲಿ ಸಂಘವು ₹1.85 ಕೋಟಿ ನಿವ್ವಳ ಲಾಭ ಗಳಿಸಿದ್ದು, 2026-27ನೇ ಸಾಲಿನಲ್ಲಿ ₹2.15 ಕೋಟಿ ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪಡೆದ ಸಾಲಗಳನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸಲಾಗಿದ್ದು, ಯಾವುದೇ ವಾಯಿದೆ ಮೀರಿದ ಸಾಲಗಳಿಲ್ಲ ಎಂದು ಈಶ್ವರ ಭಟ್ ತಿಳಿಸಿದರು.ಕಬಕ, ಕೊಡಿಪಾಡಿ, ಬನ್ನೂರು, ಪಡೂರು, ಬೆಳ್ಳಿಪಾಡಿ, ಕೋಡಿಂಬಾಡಿ, ಚಿಕ್ಕಮುಡ್ನೂರು, ಕುಳ ಹಾಗೂ ಪುತ್ತೂರು ಕಸಬಾ ಗ್ರಾಮಗಳ ವ್ಯಾಪ್ತಿಯನ್ನು ಸಂಘ ಹೊಂದಿದೆ. ಬನ್ನೂರು, ಕೊಡಿಪಾಡಿ, ಪುತ್ತೂರು ಹಾಗೂ ಬೆಳ್ಳಿಪಾಡಿ ಶಾಖೆಗಳಲ್ಲಿ ತಲಾ 100 ಟನ್ ಸಾಮರ್ಥ್ಯದ ದಾಸ್ತಾನು ಮಳಿಗೆಗಳಿವೆ. ಪಡಿತರ ಸಾಮಗ್ರಿ, ಮೈಲುತುತ್ತು ಹಾಗೂ ಸುಣ್ಣವನ್ನು ವಿತರಿಸಲಾಗುತ್ತಿದೆ.ಸದಸ್ಯರಿಗೆ ಕೃಷಿ ಸಾಲ, ಮಧ್ಯಮಾವಧಿ ಸಾಲ, ದೀರ್ಘಾವಧಿ ಸಾಲ, ಚಿನ್ನಾಭರಣ ಈಡಿನ ಸಾಲ, ಉತ್ಪತ್ತಿ ಈಡಿನ ಸಾಲ, ವಾಹನ ಖರೀದಿ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸಂಘದ ಭದ್ರತೆಗಾಗಿ ಸಿಸಿ ಕ್ಯಾಮೆರಾ ಹಾಗೂ ಸೈರನ್ ಅಳವಡಿಸಲಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಲಾಕರ್ ಮತ್ತು ತ್ವರಿತ ಹಣ ವರ್ಗಾವಣೆಗೆ ನೆಫ್ಟ್, ಆರ್‌ಟಿಜಿಎಸ್ ಸೌಲಭ್ಯ ಕಲ್ಪಿಸಲಾಗಿದೆ.ಸಂಘದ ವ್ಯಾಪ್ತಿಯಲ್ಲಿ 163 ನವೋದಯ ಸ್ವಸಹಾಯ ಗುಂಪುಗಳು ಹಾಗೂ ಇತರ 17 ಗುಂಪುಗಳಿವೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಬಡ್ಡಿ ರಿಯಾಯಿತಿ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ. ವರ್ಷಾಂತ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬಡ್ಡಿ ರಿಯಾಯಿತಿ ಹಾಗೂ ಸಾಲ ಮನ್ನಾ ಮೊತ್ತವಾಗಿ ₹1,11,25,837 ಸಂಘಕ್ಕೆ ಬರಲು ಬಾಕಿ ಇದೆ ಎಂದು ಅವರು ತಿಳಿಸಿದರು.ಸಂಘವು ಹಲವು ವರ್ಷಗಳ ಕಾಲ ಆಡಿಟ್ ವರ್ಗೀಕರಣದಲ್ಲಿ ‘ಸಿ’ ತರಗತಿಯಲ್ಲಿತ್ತು. ಆಡಳಿತ ಮಂಡಳಿಯ ದಕ್ಷ ಹಾಗೂ ಪ್ರಾಮಾಣಿಕ ಸೇವೆ, ಸಿಬ್ಬಂದಿಯ ಪರಿಶ್ರಮ ಮತ್ತು ಸದಸ್ಯರ ಸಹಕಾರದಿಂದ ನಷ್ಟವನ್ನು ಸಂಪೂರ್ಣವಾಗಿ ನಿವಾರಿಸಿ, 2013-14ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಶೇ.3ರಷ್ಟು ಡಿವಿಡೆಂಡ್ ನೀಡಲಾಗಿತ್ತು. ಕಳೆದ ಎಂಟು ವರ್ಷಗಳಿಂದ ಸಂಘವು ‘ಎ’ ತರಗತಿಯಲ್ಲಿ ಮುಂದುವರಿಯುತ್ತಿದೆ ಎಂದು ಈಶ್ವರ ಭಟ್ ಹೇಳಿದರು.

ಶಶಿಕುಮಾರ್ ರೈಗೆ ಸನ್ಮಾನ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಹಾಗೂ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬನ್ನೂರು ರೈತರ ಸೇವಾ ಸಹಕಾರಿ ಸಂಘವು ಅತ್ಯುತ್ತಮ ಸೇವೆ ನೀಡುವ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಸಂಘವು ಪ್ರತಿಯೊಬ್ಬ ರೈತರಿಗೂ ಉತ್ತೇಜನ ನೀಡುವ ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದರು.ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳಾದ ಕೋಡಿಂಬಾಡಿ ದೇವದಾಸ ಪೂಜಾರಿ ಅವರ ಪುತ್ರ ದಿಗಂತ, ಶಾಂತಿನಗರದ ಅಣ್ಣಿ ಪೂಜಾರಿ ಅವರ ಪುತ್ರ ಪವನ್ ಹಾಗೂ ಬೆಳ್ಳಿಪಾಡಿ ವಿಶ್ವಕುಮಾರ್ ಎಂ. ಅವರ ಪುತ್ರ ಶ್ರವಣ್ ಅವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.ಬೆಳೆ ವಿಮೆ ಸಮೀಕ್ಷೆ ನಡೆಸಿದವರಿಗೆ ಗೌರವಬನ್ನೂರು ವಲಯದಲ್ಲಿ ಬೆಳೆ ವಿಮೆ ಸಮೀಕ್ಷೆ ನಡೆಸಿದ ಪುರುಷೋತ್ತಮ ಕೆ., ಸುಮಿತ್ರ ಬಿ., ಬೆಳ್ಳಿಪಾಡಿಯ ಕವಿತಾ, ಚಿಕ್ಕಮುಡ್ನೂರಿನ ಯೋಗೀಶ್ ಎಂ., ಕಬಕದ ಪೂರ್ಣಿಮಾ ಕೆ.ಪಿ., ಮನೋಹರ ಪಿ., ಕೋಡಿಂಬಾಡಿಯ ಪಿ. ವೀರಪ್ಪಗೌಡ, ಕೊಡಿಪಾಡಿಯ ಪುಷ್ಪರಾಜ ಜಿ. ಹಾಗೂ ಪಡ್ನೂರಿನ ರೂಪಾ ಅವರನ್ನು ಸನ್ಮಾನಿಸಲಾಯಿತು.ಈಶ್ವರ ಭಟ್ ಸೇವೆ ಶ್ಲಾಘನೀಯಸಂಘದ ಸದಸ್ಯ ಸುದರ್ಶನ್ ಮುರ ಮಾತನಾಡಿ, ಸಂಘವು ರೈತ ಸದಸ್ಯರ ಸಮಸ್ಯೆಗಳನ್ನು ಅರಿತು ಅವರ ತೋಟಗಳಿಗೆ ಔಷಧಿ ಸಿಂಪಡಿಸಲು ಕೂಲಿಯಾಳುಗಳ ಸಹಿತ ಅಗತ್ಯ ವ್ಯವಸ್ಥೆ ಮಾಡಿಕೊಡುತ್ತಿದೆ. ಆಪದ್ಭಾಂಧವರಾಗಿ ರೈತರ ನೆರವಿಗೆ ನಿಲ್ಲುತ್ತಿರುವ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.ಸದಸ್ಯರಾದ ಶಿವಣ್ಣಗೌಡ, ಜಯಾನಂದ ಮತ್ತಿತರರು ಸಲಹೆ-ಸೂಚನೆ ನೀಡಿದರು.ಅಗಲಿದ ಸದಸ್ಯರಿಗೆ ಸಂತಾಪಸಂಘದ ಉಪಾಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ನಿರಂಜನ ರೈ ಮಠಂತಬೆಟ್ಟು ಸೇರಿದಂತೆ ಅಗಲಿದ ಸದಸ್ಯರಿಗೆ ಮಹಾಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ನಿರ್ದೇಶಕರಾದ ಎನ್. ಸುಭಾಷ್ ನಾಯಕ್, ಜಯಲಕ್ಷ್ಮಿ ಸುರೇಶ್, ಕೆ. ದೇವಾನಂದ, ಶಶಿಕಲಾ ಡಿ. ಶೆಟ್ಟಿ, ರಾಜು, ಸುಬ್ರಹ್ಮಣ್ಯ ಗೌಡ ಹನಿಯೂರು ಹಾಗೂ ಶ್ರೀನಿವಾಸ ಕೆ. ಉಪಸ್ಥಿತರಿದ್ದರು.ನಿರ್ದೇಶಕ ಮೊಹಮ್ಮದ್ ಅಶ್ರಫ್ ಕಲ್ಲೇಗ ಸ್ವಾಗತಿಸಿದರು. ನಿರ್ದೇಶಕ ಪೂವಪ್ಪ ಗೌಡ ಡಿ. ವಂದಿಸಿದರು. ನಿರ್ದೇಶಕ ಮೋಹನ್ ಪಕ್ಕಳ ಕುಂಡಾಪು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾ ಬಿ. ರೈ ವರದಿ ವಾಚಿಸಿದರು. ಸಂಘದ ಸಿಬ್ಬಂದಿ ಹಾಗೂ ಪಿಗ್ಗಿ ಸಂಗ್ರಾಹಕರು ವಿವಿಧ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಸಹಕರಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!