ಪುತ್ತೂರು/ಮಂಗಳೂರು: ರಾಜ್ಯ ಸಚಿವ ಸಂಪುಟ ಸಭೆ ಇಂದು (ಸೆ.18) ಮಂಗಳೂರಿನ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ (ಪ್ರಜಾಸೌಧ)ದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಗಣ್ಯರ ಭದ್ರತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಗಳೂರು ನಗರ ಪೊಲೀಸರು ಸೂಚಿಸಿದ್ದಾರೆ.ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆಯ ಸಚಿವರು ಸೆ.17ರಂದು ಮಂಗಳೂರಿಗೆ ಆಗಮಿಸಿದ್ದು, ಸೆ.18ರಂದು ಬೆಳಗ್ಗೆ ಮುಖ್ಯರಸ್ತೆ ಮೂಲಕ ಪಡೀಲ್‌ನ ಪ್ರಜಾಸೌಧಕ್ಕೆ ತೆರಳಿ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮೇರಿಹಿಲ್ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಿ, ನಂತರ ಮಂಗಳೂರಿಗೆ ವಾಪಸಾಗಿ ತಂಗಲಿದ್ದಾರೆ. ಸೆ.19ರಂದು ಬೆಳಗ್ಗೆ ನಿರ್ಗಮಿಸಲಿದ್ದಾರೆ.ಗಣ್ಯರ ಸಂಚಾರ ಸಾಧ್ಯತೆ ಇರುವ ಪ್ರಮುಖ ಮಾರ್ಗಗಳು:ಬಜಪೆ ವಿಮಾನ ನಿಲ್ದಾಣ–ಕಾವೂರು–ಬೋಂದೆಲ್–ಮೇರಿಹಿಲ್–ಕೆ.ಪಿ.ಟಿ.–ಕದ್ರಿ ಕಂಬಳ–ಬಂಟ್ಸ್ ಹಾಸ್ಟೆಲ್–ಬಿ.ಆರ್. ಅಂಬೇಡ್ಕರ್ ಜಂಕ್ಷನ್–ಹಂಪನಕಟ್ಟೆ–ಕ್ಲಾಕ್ ಟವರ್–ಹ್ಯಾಮಿಲ್ಟನ್ ಜಂಕ್ಷನ್ ಹಾಗೂ ಹ್ಯಾಮಿಲ್ಟನ್ ಜಂಕ್ಷನ್–ಕ್ಲಾಕ್ ಟವರ್–ಹಂಪನಕಟ್ಟಿ–ಬಿ.ಆರ್. ಅಂಬೇಡ್ಕರ್ ಜಂಕ್ಷನ್–ಕೆ.ಪಿ.ಟಿ.–ನಂತೂರು–ಪಂಪುವೆಲ್–ನಾಗುರಿ–ಬಜಾಲ್ ಕ್ರಾಸ್–ಪಡೀಲ್ ಜಂಕ್ಷನ್ ಮಾರ್ಗಗಳಲ್ಲಿ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.ಪರ್ಯಾಯ ಮಾರ್ಗಗಳುಬದ್ರಿಯಾ ಜಂಕ್ಷನ್ ↔ ಹ್ಯಾಮಿಲ್ಟನ್ ಜಂಕ್ಷನ್: ನಿಲೇಶ್ವರ ರಸ್ತೆ–ರೊಸಾರಿಯೋ ರಸ್ತೆ ಮೂಲಕ ಸಂಚರಿಸಬೇಕು.ಹ್ಯಾಮಿಲ್ಟನ್ ಜಂಕ್ಷನ್ ↔ ಬದ್ರಿಯಾ ಜಂಕ್ಷನ್: ನೆಲ್ಲಿಕಾಯಿ ರಸ್ತೆ ಮೂಲಕ ಸಂಚರಿಸಬೇಕು.ಪಂಪುವೆಲ್ ↔ ಪಡೀಲ್: ನಂತೂರು–ಕೈಕಂಬ–ಮರೋಳಿ ಮೂಲಕ ಅಥವಾ ತೊಕ್ಕೊಟ್ಟು–ದೇರಳಕಟ್ಟೆ–ಮುಡಿಪು–ಬೊಳ್ಳಾರ್–ಮೆಲ್ಕಾರ್ ಮಾರ್ಗ ಬಳಸಬಹುದು.ಬಜಾಲ್ ಕ್ರಾಸ್ (ಪ್ರಜಾಸೌಧ) ↔ ಬಜಾಲ್/ಕಂಕನಾಡಿ ರೈಲು ನಿಲ್ದಾಣ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ ಬಜಾಲ್ ಮೂಲಕ ಸಂಚರಿಸಬೇಕು.ತೊಕ್ಕೊಟ್ಟು → ಪಂಪುವೆಲ್: ಮಹಾಕಾಳಿಪಡ್ಡು–ಮಂಗಳಾದೇವಿ ಮೂಲಕ ನಗರ ಪ್ರವೇಶಿಸುವಂತೆ ಸೂಚಿಸಲಾಗಿದೆ.ಮೇಲ್ಕಂಡ ಮಾರ್ಗಗಳಲ್ಲಿ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ. ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.“ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತರಾಗಿರಿ” ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.











