ಮಂಗಳೂರು: ತುಳು ಭಾಷೆಗೆ ಕರ್ನಾಟಕ ಸರ್ಕಾರದ ಹಂತದಲ್ಲಿ ಅಧಿಕೃತ ಭಾಷಾ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಯಿತು.ದಶಕಗಳ ಕಾಲ ನಡೆದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿರುವುದು ಕರಾವಳಿ ಹಾಗೂ ರಾಜ್ಯದ ತುಳು ಭಾಷಿಕರಿಗೆ ಸಂತಸದ ವಿಷಯವಾಗಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.ಪಕ್ಷದ ಪ್ರಮುಖ ಮುಖಂಡ ಪದ್ಮರಾಜ್ ಆರ್. ಪೂಜಾರಿ ಕಾರ್ಯಕ್ರಮದ ನೇತೃತ್ವ ವಹಿಸಿ, ತುಳು ಭಾಷೆಯ ಹಿತಾಸಕ್ತಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.“ತುಳು ಭಾಷೆಗೆ ಮಾನ್ಯತೆ ನೀಡುವುದು ಕರಾವಳಿಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ನಿರ್ಧಾರ ಕೈಗೊಂಡ ಡಿ.ಕೆ. ಶಿವಕುಮಾರ್ ಅವರ ನಾಯಕತ್ವಕ್ಕೆ ನಾವು ಋಣಿಯಾಗಿದ್ದೇವೆ” ಎಂದು ಅವರು ಹರ್ಷ ವ್ಯಕ್ತಪಡಿಸಿದರು.ತುಳು ಭಾಷೆಗೆ ದೊರೆತಿರುವ ಈ ಮಾನ್ಯತೆಯು ತುಳುನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಮುಂದಿನ ಪೀಳಿಗೆಗೆ ತುಳು ಭಾಷೆಯನ್ನು ಉಳಿಸಿ ಬೆಳೆಸಲು ಪ್ರೇರಣೆಯಾಗಲಿದೆ ಎಂದು ಅವರು ಹೇಳಿದರು.











