ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನೊಬ್ಬ ಅಶ್ಲೀಲ ಚಿತ್ರಗಳ ನೆಪದಲ್ಲಿ ಬೆದರಿಸಿ ಯುವತಿಯಿಂದ ಸುಮಾರು 10 ಪವನ್ ಚಿನ್ನಾಭರಣ ಪಡೆದಿರುವುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಪ್ರೀತ್ ಗೌಡ ಯಾನೆ ಲತೀಶ್ ಗೌಡ ಎಂಬಾತ ಜುಲೈ ತಿಂಗಳಲ್ಲಿ ಇನ್‌ಸ್ಟಾಗ್ರಾಂ ಮೂಲಕ ಯುವತಿಗೆ ಪರಿಚಯವಾಗಿದ್ದ. ಬಳಿಕ ಮೆಸೇಜ್ ಮೂಲಕ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡು, ಅಶ್ಲೀಲ ಚಿತ್ರಗಳನ್ನು ಕಳುಹಿಸುವಂತೆ ಒತ್ತಾಯಿಸಿ ಬೆದರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಯುವತಿಯಿಂದ ಚಿತ್ರಗಳನ್ನು ಪಡೆದ ಬಳಿಕ, ಆಕೆಯ ಬಳಿಯಿದ್ದ ಚಿನ್ನಾಭರಣಗಳನ್ನು ನೀಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಚಿನ್ನಾಭರಣ ನೀಡದಿದ್ದರೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.ನಂತರ ಆರೋಪಿಯ ಸೂಚನೆಯಂತೆ ಆತನ ಸ್ನೇಹಿತನೊಬ್ಬ ಯುವತಿ ತಿಳಿಸಿದ ಸ್ಥಳಕ್ಕೆ ತೆರಳಿ ಚಿನ್ನಾಭರಣ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಮತ್ತೆ ಚಿನ್ನಾಭರಣ ನೀಡುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಯುವತಿ ಈ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾಳೆ.ಮನೆಯವರು ಆರೋಪಿಯನ್ನು ಸಂಪರ್ಕಿಸಿದಾಗ, ಪಡೆದ ಚಿನ್ನಾಭರಣವನ್ನು ವಾಪಸ್ ನೀಡುವುದಾಗಿ ಆತ ಹೇಳಿದ್ದರೂ ಬಳಿಕ ಚಿನ್ನಾಭರಣ ಹಿಂತಿರುಗಿಸದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಆಗಸ್ಟ್–ಸೆಪ್ಟೆಂಬರ್ ಅವಧಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!