ಪುತ್ತೂರು: ಮುಂಬರುವ ಚುನಾವಣೆಗಳನ್ನು ಎದುರಿಸಲು ತಳಮಟ್ಟದಿಂದ ಪಕ್ಷ ಸಂಘಟನೆಯನ್ನು ಬಲಪಡಿಸುವುದು ಹಾಗೂ ಸಮರ್ಪಕ ಚುನಾವಣಾ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಎಲೆಕ್ಷನ್ ಸಮ್ಮಿಟ್–2026 ಕಾರ್ಯಕ್ರಮ ನ. 1ರಂದು ಮುಕ್ವೆಯ ಆರ್‌ಜೆಎಂ ಆಡಿಟೋರಿಯಂನಲ್ಲಿ ನಡೆಯಿತು.ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಚುನಾವಣಾ ರಾಜಕಾರಣದಲ್ಲಿ ಸಂಘಟನಾತ್ಮಕ ಸಿದ್ಧತೆ ಹಾಗೂ ಕಾರ್ಯಕರ್ತರ ಸಕ್ರಿಯ ಪಾತ್ರ ಪ್ರಮುಖವಾಗಿದೆ. ಚುನಾವಣೆ ಕೇವಲ ಮತದಾನಕ್ಕೆ ಸೀಮಿತವಾಗದೆ, ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಪಕ್ಷದ ಸಿದ್ಧಾಂತ ಮತ್ತು ಕಾರ್ಯಚಟುವಟಿಕೆಗಳನ್ನು ತಳಮಟ್ಟಕ್ಕೆ ತಲುಪಿಸುವ ಸಂಘಟಿತ ಪ್ರಯತ್ನವಾಗಬೇಕು. ಪ್ರತಿಯೊಂದು ಬೂತ್ ಮಟ್ಟದಲ್ಲೂ ಸಮರ್ಪಕ ಸಿದ್ಧತೆ ಮಾಡಿಕೊಳ್ಳುವ ಮೂಲಕ ಚುನಾವಣಾ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ಹೇಳಿದರು
ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, ಮುಂಬರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕ್ಷೇತ್ರದ ಪ್ರತಿಯೊಂದು ಹಂತದಲ್ಲೂ ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು. ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರೊಂದಿಗೆ ನಿರಂತರ ಸಂಪರ್ಕ ಬೆಳೆಸಬೇಕು ಎಂದು ತಿಳಿಸಿದರು.ಸಭೆಯಲ್ಲಿ ಪಕ್ಷದ ಚುನಾವಣಾ ಪೂರ್ವಸಿದ್ಧತೆ, ಸಂಘಟನಾತ್ಮಕ ಚಟುವಟಿಕೆಗಳು, ಕ್ಷೇತ್ರಮಟ್ಟದ ಕಾರ್ಯತಂತ್ರಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದೀಕ್ ಪುತ್ತೂರು, ಶಬೀರ್, ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ಶಾಕಿರ್ ಅಲಕೆಮಜಲು, ಚುನಾವಣಾ ಉಸ್ತುವಾರಿ ಸಿದ್ದೀಕ್ ಅಲೆಕ್ಕಾಡಿ, ಪುತ್ತೂರು ಕ್ಷೇತ್ರ ಸಮಿತಿ ಉಪಾಧ್ಯಕ್ಷ ಶಂಸುದ್ದೀನ್ ಈಶ್ವರಮಂಗಿಲ, ಕಾರ್ಯದರ್ಶಿ ಉಸ್ಮಾನ್ ಎ.ಕೆ., ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪುತ್ತೂರು ಹಾಗೂ ಕ್ಷೇತ್ರ ಚುನಾವಣಾ ಉಸ್ತುವಾರಿ ಜುನೈದ್ ಸಾಲ್ಮರ ಉಪಸ್ಥಿತರಿದ್ದರು.ಕ್ಷೇತ್ರ ಸಮಿತಿ ಸದಸ್ಯರು, ಬ್ಲಾಕ್ ಸಮಿತಿ ಪ್ರತಿನಿಧಿಗಳು ಹಾಗೂ ಬ್ರಾಂಚ್ ಮಟ್ಟದ ನಾಯಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಆಯೋಜಿಸಿತ್ತು.









