ಪುತ್ತೂರು: ಪಂಚ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಮುಳುಗಿದೆ. ಜನಪರ ಅಭಿವೃದ್ಧಿಯ ಇಚ್ಛಾಶಕ್ತಿಯಿಲ್ಲದ ಸರಕಾರ ಕೇಂದ್ರದ ಯೋಜನೆಗಳಿಗೂ ಅಡ್ಡಿಪಡಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ನಗರ ಮಂಡಲದ ವತಿಯಿಂದ ಸೋಮವಾರ ನಗರದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಆಯೋಜಿಸಿದ್ದ ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.ಜನರು ಪಾವತಿಸುವ ತೆರಿಗೆ ಹಣ ಜನರ ಅಭಿವೃದ್ಧಿಗೆ ಬಳಕೆಯಾಗದಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ಸರಕಾರ ನಿರ್ಮಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿದ್ದ 36 ಸಾವಿರ ಕೋಟಿ ರೂ. ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ವೃದ್ಧರು, ವಿಧವೆಯರು ಮತ್ತು ಅಂಗವಿಕಲರ ಪಿಂಚಣಿಯನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಹೊಸ ವಸತಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಒಂದೇ ಒಂದು ಬಿಪಿಎಲ್ ಕಾರ್ಡ್ ವಿತರಿಸಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯೊಡ್ಡಲಾಗಿದೆ. ಹೈಕೋರ್ಟ್ ಛೀಮಾರಿ ಹಾಕಿದರೂ ಸರಕಾರ ಎಚ್ಚೆತ್ತುಕೊಂಡಿಲ್ಲ ಎಂದು ಟೀಕಿಸಿದರು.

ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಶಾಸಕರಿಗೆ ಎಚ್ಚರಿಕೆ ನೀಡುತ್ತೇವೆ. ಇಂತಹ ವರ್ತನೆ ಮುಂದುವರಿದರೆ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಬಿಜೆಪಿ ಅಧಿಕಾರಕ್ಕಾಗಿ ಮಾತ್ರ ಇರುವ ಪಕ್ಷವಲ್ಲ; ತ್ಯಾಗದ ಹಿನ್ನೆಲೆಯುಳ್ಳ ಪಕ್ಷ. ಮೊದಲು ಅಭಿವೃದ್ಧಿ ಮಾಡಿ ತೋರಿಸಿ ಎಂದು ಸವಾಲು ಹಾಕಿದರು.ರೀಲ್ಸ್ ಬಿಟ್ಟು ಅಭಿವೃದ್ಧಿ ಮಾಡಿಶಾಸಕ ಅಶೋಕ್ ಕುಮಾರ್ ರೈ ಅವರನ್ನು ಉದ್ದೇಶಿಸಿ ಮಾತನಾಡಿದ ಕಿಶೋರ್ ಪುತ್ತೂರು, ‘ಬಂಡಾಲ್ ಬಡಾಯಿ ಅಶೋಕಣ್ಣ, ನಿಮ್ಮ ರೀಲ್ಸ್ ಬಿಟ್ಟು ದಯವಿಟ್ಟು ಅಭಿವೃದ್ಧಿ ಮಾಡಿ. ಅಧಿಕಾರದ ಮದದಿಂದ ಮಾತನಾಡುವುದನ್ನು ಬಿಡಿ. ನಾವು ಯಾರಿಗೂ ಅಡ್ಡಿಪಡಿಸುವುದಿಲ್ಲ. ಆದರೆ ಶಾಸಕರು ಪದೇಪದೇ ಹದ್ದು ಮೀರಿ ವರ್ತಿಸುತ್ತಿರುವುದರಿಂದ ಪ್ರತಿಕ್ರಿಯಿಸಬೇಕಾಗಿದೆ’ ಎಂದರು.

ಸಭೆಯ ಉಸ್ತುವಾರಿ ವಹಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ, ನಗರಸಭೆಗೆ ಆಡಳಿತಾಧಿಕಾರಿ ನೇಮಕವಾಗಿ ಒಂದು ವರ್ಷ ಕಳೆದಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ 25 ಕೋಟಿ ರೂ. ವಿಶೇಷ ಅನುದಾನವನ್ನು ಪ್ರತಿ ವಾರ್ಡ್‌ನ ಅಭಿವೃದ್ಧಿಗೆ ಹಂಚಿಕೆ ಮಾಡಲಾಗಿತ್ತು. ಕೇಂದ್ರ ಸರಕಾರ 15ನೇ ಹಣಕಾಸು ಆಯೋಗದಡಿ 2 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರಕಾರ ಕಳೆದ ಮೂರೂವರೆ ವರ್ಷಗಳಲ್ಲಿ ಕೇವಲ ಒಂದೂವರೆ ಕೋಟಿ ರೂ. ನೀಡಿದೆ. ಇದು ಯಾವ ರೀತಿಯ ಅಭಿವೃದ್ಧಿ ಎಂದು ಪ್ರಶ್ನಿಸಿದರು. ಮುಂದಿನ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 31 ಸ್ಥಾನಗಳನ್ನೂ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಪ್ರಾಸ್ತಾವಿಕವಾಗಿ ಮಾತನಾಡಿ, ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರಕಾರದ ವಿರುದ್ಧ ಹಕ್ಕೊತ್ತಾಯ ಹೋರಾಟ ಆರಂಭಿಸಲಾಗಿದೆ. ಇದರ ಭಾಗವಾಗಿ ಪ್ರತಿದಿನ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ತಲಾ ಒಂದು ಕಿ.ಮೀ. ಪಾದಯಾತ್ರೆ ನಡೆಸಿ ಸಭೆ ಆಯೋಜಿಸಲಾಗುತ್ತಿದೆ ಎಂದರು.ಬೊಳುವಾರಿನಲ್ಲಿ ಪಾದಯಾತ್ರೆಗೆ ಚಾಲನೆಸಭೆಗೂ ಮುನ್ನ ಬೊಳುವಾರಿನ ಶ್ರೀ ಆಂಜನೇಯ ಮಂತ್ರಾಲಯದ ಬಳಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆಗೆ ಸಂಘ ಪರಿವಾರದ ಹಿರಿಯ ನಾಯಕ ಯು. ಪೂವಪ್ಪ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ನೂರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ, ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆಯಲ್ಲಿ ಸಾಗಿದರು.ಸಭೆಯ ಬಳಿಕ ನಗರಸಭೆ ಪೌರಾಯುಕ್ತರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತಾ, ವಿದ್ಯಾ ಆರ್. ಗೌರಿ, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್, ಮಾಜಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ನಾಯಕ್, ಲೋಕೇಶ್ ಚಾಕೋಟೆ, ವಕ್ತಾರ ರಾಜೇಶ್ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!