ಪುತ್ತೂರು: ನವೆಂಬರ್ 1ರಂದು ನಡೆಯಲಿರುವ ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 11 ಮಂದಿ ಸಾಧಕರು ಹಾಗೂ ಒಂದು ಸಂಸ್ಥೆಯನ್ನು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಾಲೂಕು ಆಡಳಿತ ತಿಳಿಸಿದೆ.ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರೂ ಆಗಿರುವ ತಹಶೀಲ್ದಾರ್, ಸಮಿತಿ ಸಂಚಾಲಕರೂ ಆಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ನಗರಸಭೆ ಪೌರಾಯುಕ್ತರು ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಒಳಗೊಂಡ ಆಯ್ಕೆ ಸಮಿತಿ ಸಭೆ ನಡೆಸಿ ಪ್ರಶಸ್ತಿ ಪುರಸ್ಕೃತರನ್ನು ಅಂತಿಮಗೊಳಿಸಿದೆ.ಪ್ರಶಸ್ತಿ ಪುರಸ್ಕೃತರು:ಎಂ.ಪಿ. ಅಬೂಬಕ್ಕರ್, ಸಂಚಾಲಕರು, ಎಂ.ಪಿ.ಎಂ. ವಿದ್ಯಾಲಯ, ಮುರ ನೆಹರು ನಗರ – ಶಿಕ್ಷಣ ಕ್ಷೇತ್ರ.ಉಮೇಶ್ ದೇವಾಡಿಗ, ಮೇಲ್ಮಜಲು ಮನೆ, ಬನ್ನೂರು – ವಾದ್ಯ ಸಂಗೀತ ಕ್ಷೇತ್ರ.ಬಿ. ಶೇಖರ ಭಂಡಾರಿ, ನೆಕ್ಕಿಲ ಮನೆ, ಬನ್ನೂರು – ಯಕ್ಷಗಾನ ಕ್ಷೇತ್ರ.ರವಿಚಂದ್ರ ರೈ, ಮುಂಡೂರು – ರಂಗಭೂಮಿ ಕ್ಷೇತ್ರ.ನಾರಾಯಣ ರೈ ಕುಕ್ಕುವಳ್ಳಿ, ದರ್ಬೆ – ಮಕ್ಕಳ ಸಾಹಿತ್ಯ ಕ್ಷೇತ್ರ.ಸಿ. ಶೇಷಪ್ಪ ಕಜೆಮಾರ್ (ಸಿಶೇ ಕಜೆಮಾರ್), ಕಜೆಮಾರು, ಕೆದಂಬಾಡಿ – ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರ.ತನುಜಾ ಕ್ಷೇವಿಯರ್, ಕೆಮ್ಮಿಂಜೆ – ದಿವ್ಯಾಂಗ ಮಕ್ಕಳ ಸೇವೆ.ನಯನಾ ರೈ, ನೆಲ್ಲಿಕಟ್ಟೆ – ಸಮಾಜ ಸೇವೆ.ಶಶಿಧರ ರೈ, ಪುತ್ತೂರು – ಪತ್ರಿಕೋದ್ಯಮ ಕ್ಷೇತ್ರ.ದೀಪಕ್ ಕುಮಾರ್, ಮೂಕಾಂಬಿಕ ನೃತ್ಯ ಶಾಲೆ, ದರ್ಬೆ – ಭರತನಾಟ್ಯ ಕ್ಷೇತ್ರ.ಧನ್ನಿ ರೈ, ಕೆ. ಕೋಟೆ ಮನೆ, ಪಾಣಾಜೆ – ಬಾಲ ಪ್ರತಿಭೆ.ಸಂಸ್ಥೆ ವಿಭಾಗ: ರೋಟರಿ ಕ್ಲಬ್ ಪುತ್ತೂರು ಯುವ.32 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಶಶಿಧರ ರೈ ಸೇವೆಪತ್ರಿಕೋದ್ಯಮ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಶಶಿಧರ ರೈ ಎಸ್. ಅವರು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುತ್ಯಾಳ ಹೊಸಮನೆ ನಿವಾಸಿ ದಿ. ಕೊರಗಪ್ಪ ರೈ ಸಜಂಕಾಡಿ ಮತ್ತು ಗಿರಿಜಾ ಎಸ್. ರೈ ದಂಪತಿಯ ಪುತ್ರ.ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ಮಂಗಳ ವಾರಪತ್ರಿಕೆ, ಕಾಲೇಜಿನ ‘ಅಂತರಂಗ’ ಮತ್ತು ‘ಫಿಲೋವಾಣಿ’ ಸಂಚಿಕೆಗಳಲ್ಲಿ ಚುಟುಕು, ಕವನ ಹಾಗೂ ಕಥೆಗಳನ್ನು ಪ್ರಕಟಿಸಿದ್ದರು. ಸ್ಥಳೀಯ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಬರಹಗಳನ್ನು ಪ್ರಕಟಿಸುವುದರೊಂದಿಗೆ ಸುದ್ದಿಗಳನ್ನು ಕೂಡ ಮಾಡಿಕೊಡುತ್ತಿದ್ದರು. ಪದವಿ ಶಿಕ್ಷಣದ ಬಳಿಕ ಇದೇ ಪತ್ರಿಕೆಯಲ್ಲಿ ವರದಿಗಾರರಾಗಿ ವೃತ್ತಿಜೀವನ ಆರಂಭಿಸಿದರು.ಬಳಿಕ ಸಂಯುಕ್ತ ಕರ್ನಾಟಕ ಮತ್ತು ಉಷಾಕಿರಣ ಪತ್ರಿಕೆಗಳಲ್ಲಿ ಪುತ್ತೂರು ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 18 ವರ್ಷಗಳಿಂದ ಪ್ರಜಾವಾಣಿಯ ಪುತ್ತೂರು ತಾಲೂಕು ಹಾಗೂ ಗ್ರಾಮಾಂತರ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ವಿಜಯವಾಣಿ ಪತ್ರಿಕೆಯ ಪುತ್ತೂರು ಗ್ರಾಮಾಂತರ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯಕಾಲ ಮತ್ತು ಕರಾವಳಿ ಅಲೆ ಪತ್ರಿಕೆಗಳ ತಾಲೂಕು ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.ಒಟ್ಟು 32 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿರುವ ಇವರು, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಮೂರು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿರುವ ಇವರು ನೆಟ್ಟಣಿಗೆ ಮುನ್ನೂರು ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಎರಡು ಬಾರಿ ಅಧ್ಯಕ್ಷರಾಗಿ, ಮೇನಾಲ ಮಂಗಳಾ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ, ಸಜಂಕಾಡಿ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ಶೈಕ್ಷಣಿಕ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾಗಿ, ಪ್ರೌಢಶಾಲೆಯ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಾಗೂ ಆದಿ ಪಡುಮಲೆ ಖ್ಯಾತಿಯ ಪೂಮಾಣಿ ಕಿನ್ನಿಮಾಣಿ, ವ್ಯಾಪ್ರಚಾಮುಂಡಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಿ. ಶೇಷಪ್ಪ ಕಜೆಮಾರ್ ಸಾಧನೆಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ಸಿ. ಶೇಷಪ್ಪ ಕಜೆಮಾರ್ ಅವರು ‘ಸಿಶೇ ಕಜೆಮಾರ್’ ಎಂಬ ಕಾವ್ಯನಾಮದಿಂದ ಚಿರಪರಿಚಿತರು. 1978ರ ಜೂನ್ 1ರಂದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕಜೆ ಎಂಬಲ್ಲಿ ಜನಿಸಿದ ಇವರು, ತಿಂಗಳಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಯ್ಯೂರು ಸರ್ಕಾರಿ ಪ್ರೌಢಶಾಲೆ ಹಾಗೂ ಕುಂಬ್ರ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ತಿಂಗಳಾಡಿ ಸಮೀಪದ ಕಜೆಮಾರಿನಲ್ಲಿ ವಾಸವಾಗಿದ್ದಾರೆ.ಕಳೆದ 25 ವರ್ಷಗಳಿಂದ ಸಕ್ರಿಯ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಇವರು, ಆರಂಭದಲ್ಲಿ ‘ಕರಾವಳಿ ಮಾರುತ’ ಸಂಜೆ ಪತ್ರಿಕೆಯಲ್ಲಿ ಎರಡು ವರ್ಷ ಹಾಗೂ ‘ಯುವಶಕ್ತಿ ಕ್ರಾಂತಿ’ ವಾರಪತ್ರಿಕೆಯಲ್ಲಿ ಒಂದು ವರ್ಷ ವರದಿಗಾರ ಮತ್ತು ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 22 ವರ್ಷಗಳಿಂದ ‘ಸುದ್ದಿ ಬಿಡುಗಡೆ’ ಕನ್ನಡ ದೈನಿಕದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಗರಡಿಗಳ ಚರಿತ್ರೆ, ದೀಪಾವಳಿ ಮತ್ತು ಕಂಬಳ ವಿಶೇಷಾಂಕಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಇವರು ಮಂಗಳೂರು ಹಾಗೂ ಮಡಿಕೇರಿ ಆಕಾಶವಾಣಿಯಲ್ಲಿ ತುಳು-ಕನ್ನಡ ಕಥೆ, ಕವನ ವಾಚನ ಮತ್ತು ಯುವವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಕನ್ನಡ ಮತ್ತು ತುಳು ಸಾಹಿತ್ಯ ಸಮ್ಮೇಳನಗಳು, ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸೇರಿದಂತೆ ನೂರಾರು ಕವಿಗೋಷ್ಠಿಗಳಲ್ಲಿ ಕವನ ಮತ್ತು ಚುಟುಕುಗಳನ್ನು ವಾಚಿಸಿದ್ದಾರೆ.ತುಳು ನಾಟಕಗಳಲ್ಲಿಯೂ ಅಭಿನಯಿಸಿರುವ ಇವರು ‘ಬಯ್ಯಮಲ್ಲಿಗೆ’, ‘ಭಾಗ್ಯಲಕ್ಷ್ಮಿ’ ಮೊದಲಾದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಶಿವಧ್ವಜ್ ನಿರ್ದೇಶನದ ‘ಗೊತ್ತಾನಗ ಪೊರ್ತಾಂಡ್’ ಮತ್ತು ‘ಬಲೆ ತೆಲಿಪುಗ’ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.ಬಡವರು ಮತ್ತು ಸಂಕಷ್ಟದಲ್ಲಿರುವವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ನೂರಾರು ಲೇಖನಗಳನ್ನು ಬರೆದಿರುವ ಇವರು, ಚಿಕಿತ್ಸೆಗಾಗಿ ನೆರವು ಅಗತ್ಯವಿರುವವರ ಕುರಿತು ಬರಹಗಳನ್ನು ಪ್ರಕಟಿಸಿ ಸಹಾಯಹಸ್ತ ದೊರಕಿಸಲು ಶ್ರಮಿಸಿದ್ದಾರೆ. ಸಾಧಕರ ಪರಿಚಯ, ಕಲಾವಿದರ ಸಂದರ್ಶನ ಹಾಗೂ ಸಿನಿಮಾ ವಿಮರ್ಶೆಗಳನ್ನೂ ಪ್ರಕಟಿಸಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಹಾಗೂ ಜಾನಪದ ಸಾಹಿತ್ಯ ವೇದಿಕೆಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಸುದ್ದಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಮಮತಾ ಕಜೆಮಾರ್ ಪುಣಚ ಗ್ರಾಮ ಪಂಚಾಯತ್ ಉದ್ಯೋಗಿಯಾಗಿದ್ದು, ಪುತ್ರಿ ಚಾರ್ವಿ ಕಜೆಮಾರ್ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯು.ಕೆ.ಜಿ. ವ್ಯಾಸಂಗ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!