ಪುತ್ತೂರು: ಕರಾವಳಿ ಭಾಗದ ಹಾಗೂ ಪುತ್ತೂರಿನ ಜನರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದೆ. ಯಶವಂತಪುರ–ಮಡಗಾಂವ್–ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (26655/26656) ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಿಲುಗಡೆ ಮಂಜೂರಾಗಿದ್ದು, ನೂತನ ವೇಳಾಪಟ್ಟಿಯೊಂದಿಗೆ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.ಈ ಹಿಂದೆ ಮಂಗಳೂರು ಸೆಂಟ್ರಲ್–ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ (20645/20646) ರೈಲಿನ ಸೇವೆಯನ್ನು ರದ್ದುಗೊಳಿಸಿ, ಅದನ್ನು ಯಶವಂತಪುರದವರೆಗೆ ವಿಸ್ತರಿಸಲಾಗಿದೆ. ಇದರಿಂದ ಪುತ್ತೂರು ಭಾಗದ ಪ್ರಯಾಣಿಕರಿಗೆ ಬೆಂಗಳೂರಿಗೆ ತೆರಳಲು ಅನುಕೂಲವಾಗಲಿದೆ.
ಇನ್ನು ಮಂಗಳೂರು ಜಂಕ್ಷನ್‌ಗೆ ತೆರಳುವ ಅಗತ್ಯವಿಲ್ಲದೆ ಕಬಕ ಪುತ್ತೂರು ನಿಲ್ದಾಣದಿಂದಲೇ ವಂದೇ ಭಾರತ್ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಬಹುದಾಗಿದೆ.ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯಶವಂತಪುರದಿಂದ ಮಡಗಾಂವ್‌ವರೆಗೆ ಸಂಚರಿಸಲಿರುವ ಈ ರೈಲು ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಯಶವಂತಪುರ, ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರುಡೇಶ್ವರ, ಗೋಕರ್ಣ ರೋಡ್, ಕಾರವಾರ ಹಾಗೂ ಮಡಗಾಂವ್ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಲಿದೆ.
ನವೆಂಬರ್ ಮೂರನೇ ವಾರದಲ್ಲಿ ಚಾಲನೆ ನಿರೀಕ್ಷೆಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದ ಫಲವಾಗಿ ರೈಲು ಸೇವೆಯ ವಿಸ್ತರಣೆ ಹಾಗೂ ಕಬಕ ಪುತ್ತೂರು ನಿಲುಗಡೆಗೆ ಅನುಮೋದನೆ ದೊರೆತಿದೆ ಎನ್ನಲಾಗಿದೆ.ನವದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಲಾಗಿತ್ತು. ನವೆಂಬರ್ ಮೂರನೇ ವಾರದೊಳಗೆ ರೈಲ್ವೆ ಸಚಿವರು ಮಂಗಳೂರಿಗೆ ಆಗಮಿಸಿ ವಿಸ್ತರಿತ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ









