ಪುತ್ತೂರು: ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ, ನಕಲಿ ಸಾಲದ ಅರ್ಜಿಗಳ ಸೃಷ್ಟಿ ಹಾಗೂ ಆಡಳಿತ ಮಂಡಳಿಯ ಸಭಾ ನಡಾವಳಿ ಪುಸ್ತಕದಲ್ಲಿ ತಿದ್ದುಪಡಿ ನಡೆಸುವ ಮೂಲಕ ಸುಮಾರು ₹6.86 ಕೋಟಿ ವಂಚನೆ ಎಸಗಿರುವ ಆರೋಪಕ್ಕೆ ಸಂಬಂಧಿಸಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಗೌಡ ಕೆ. ಹಾಗೂ ಮಂಗಳೂರಿನ ಎಸ್ಎಸ್ ಅಪಾರ್ಟ್ಮೆಂಟ್ನ ಸಮೀರಾ ರಿಯಾಜ್ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಅವರು ಈ ಸಂಬಂಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ನ್ಯಾಯಾಲಯದ ಆದೇಶ (ಡಿಸ್.ನಂ. 2495/2026)ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.₹6.86 ಕೋಟಿ ಅನುಮಾನಾಸ್ಪದ ಹಣ ವರ್ಗಾವಣೆಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘವು ಸಾರ್ವಜನಿಕರಿಂದ ವಿವಿಧ ಠೇವಣಿಗಳ ರೂಪದಲ್ಲಿ ಒಟ್ಟು ₹31,21,34,321 ಸಂಗ್ರಹಿಸಿದ್ದು, 12 ಮಂದಿ ಚುನಾಯಿತ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.2025-26ನೇ ಸಾಲಿನ ವ್ಯವಹಾರಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಸುಮಾರು ₹6.86 ಕೋಟಿ ಮೊತ್ತದ ಅನುಮಾನಾಸ್ಪದ ಹಣ ವರ್ಗಾವಣೆ ನಡೆದಿರುವುದು ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿದಾಗ, ಕಾನೂನುಬದ್ಧ ಆಧಾರ ಹಾಗೂ ಸೂಕ್ತ ದಾಖಲೆಗಳಿಲ್ಲದೆ ಹಣವನ್ನು ಸಮೀರಾ ರಿಯಾಜ್ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಸಂಘದ ಆನ್ಲೈನ್ ಸಾಫ್ಟ್ವೇರ್ ಮೂಲಕ ಖಾತೆಗಳ ವ್ಯವಹಾರ ನಿರ್ವಹಿಸುವ ಜವಾಬ್ದಾರಿಯನ್ನು ಸಿಇಒ ಕೇಶವ ಗೌಡ ಕೆ. ಅವರಿಗೆ ವಹಿಸಲಾಗಿತ್ತು. ಅನುಮಾನಾಸ್ಪದ ಹಣ ವರ್ಗಾವಣೆಗಳು ಅವರ ಮೂಲಕವೇ ನಡೆದಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಬ್ಲಾಕ್ಮೇಲ್ ಮಾಡಿ ಹಣ ಪಡೆದ ಆರೋಪಈ ಕುರಿತು ಕೇಶವ ಗೌಡ ಅವರನ್ನು ವಿಚಾರಿಸಿದಾಗ, ಮಂಗಳೂರಿನ ಜಪ್ಪಿನಮೊಗರು ನಿವಾಸಿ ಯೋಗೀಶ್ ಭಟ್ ಅಲಿಯಾಸ್ ಯೋಗೀಶ್ ಆಚಾರ್ಯ ಅವರು ಸಮೀರಾ ರಿಯಾಜ್ ಅವರನ್ನು ಪರಿಚಯಿಸಿದ್ದರು ಎಂದು ತಿಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಯೋಗೀಶ್ ಭಟ್ ಅವರು ಸಮೀರಾ ರಿಯಾಜ್ ಅವರಿಗೆ ಹಣ ನೀಡುವ ಉದ್ದೇಶದಿಂದ ಈ ಹಿಂದೆ ಕೇಶವ ಗೌಡ ಅವರಿಂದ ಬ್ಯಾಂಕ್ ವರ್ಗಾವಣೆ ಮೂಲಕ ₹1.57 ಕೋಟಿ ಪಡೆದು, ಅದನ್ನು ಸಮೀರಾ ರಿಯಾಜ್ ಅವರ ಖಾತೆಗೆ ವರ್ಗಾಯಿಸಿದ್ದರು ಎನ್ನಲಾಗಿದೆ.ಬಳಿಕ ಸಮೀರಾ ರಿಯಾಜ್ ಅವರು ಹಣ ಹಿಂದಿರುಗಿಸುವಂತೆ ಪ್ರತಿದಿನ ದೂರವಾಣಿ ಕರೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಹಣ ನೀಡದಿದ್ದರೆ ಸುಳ್ಳು ಆರೋಪಗಳನ್ನು ಮಾಡಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಈ ಬೆದರಿಕೆಯಿಂದ ಹೆದರಿ ಹಂತ ಹಂತವಾಗಿ ಒಟ್ಟು ₹7.26 ಕೋಟಿ ವರ್ಗಾಯಿಸಿರುವುದಾಗಿ ಕೇಶವ ಗೌಡ ತಿಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.ನಕಲಿ ಸಾಲದ ಅರ್ಜಿ, ಸಹಿ ನಕಲು ಆರೋಪಹಣ ವರ್ಗಾವಣೆಯ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಇತರ ನಿರ್ದೇಶಕರು ಬ್ಯಾಂಕಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಸಾಲಗಾರರ ಹೆಸರಿನಲ್ಲಿ ನಕಲಿ ಸಾಲದ ಅರ್ಜಿಗಳನ್ನು ಸೃಷ್ಟಿಸಿರುವುದು, ಸಾಲ ಮಂಜೂರಾತಿಗೆ ಸಂಬಂಧಿಸಿದ ಆಡಳಿತ ಮಂಡಳಿಯ ಸಭಾ ನಡಾವಳಿ ಪುಸ್ತಕದ ಪುಟಗಳು ಹಾಗೂ ದಾಖಲೆಗಳನ್ನು ತಿದ್ದಿರುವುದು, ಅಧ್ಯಕ್ಷರು ಮತ್ತು ನಿರ್ದೇಶಕರು ಸಹಿ ಮಾಡಿದ ಬಳಿಕ ಅವರ ಗಮನಕ್ಕೆ ತಾರದೆ ಹೆಚ್ಚುವರಿ ವಿವರಗಳು ಮತ್ತು ಮೊತ್ತಗಳನ್ನು ನಮೂದಿಸಿರುವುದು ಆರೋಪಗಳಲ್ಲಿ ಸೇರಿವೆ.ಅಲ್ಲದೆ, ಅಧ್ಯಕ್ಷರ ಅನುಮತಿಯಿಲ್ಲದೆ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ನಕಲಿ ಸಹಿಗಳನ್ನು ಹಾಕಿರುವುದು, ವಕೀಲರ ಕಾನೂನು ಅಭಿಪ್ರಾಯ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಹಳೆಯ ಅಭಿಪ್ರಾಯ ಪತ್ರಗಳನ್ನು ಹೊಸ ಸಾಲದ ಅರ್ಜಿಗಳಿಗೆ ಲಗತ್ತಿಸಿರುವುದು ಹಾಗೂ ವಕೀಲರ ಸಹಿಯನ್ನು ನಕಲು ಮಾಡಿ ಸಾಲದ ದಾಖಲೆಗಳನ್ನು ತಿರುಚಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.ಸಂಘದ ನಿಯಮಾನುಸಾರ ಮಂಜೂರಾಗಿದ್ದ ಸಾಲಗಳ ದಾಖಲೆಗಳಲ್ಲಿಯೂ ಬಳಿಕ ತಿದ್ದುಪಡಿ ಮಾಡಿ ನಕಲಿ ಸಹಿ ಹಾಗೂ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದೆ.2024ರಿಂದಲೇ ಅಕ್ರಮ ನಡೆದಿರುವ ಶಂಕೆಸಮೀರಾ ರಿಯಾಜ್ ಅವರಿಗೆ ಹಣ ವರ್ಗಾಯಿಸುವ ಉದ್ದೇಶದಿಂದ ಕೇಶವ ಗೌಡ ಅವರು 2024ರಿಂದಲೇ ಈ ಕೃತ್ಯಗಳಲ್ಲಿ ತೊಡಗಿರುವ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಡಳಿತ ಮಂಡಳಿಯ ಸಭಾ ನಡಾವಳಿ ಪುಸ್ತಕದಲ್ಲಿ ದಿನಾಂಕ ಹಾಗೂ ಮೊತ್ತಗಳನ್ನು ತಿದ್ದುಪಡಿ ಮಾಡಿ, ಅಗತ್ಯ ಇನಿಷಿಯಲ್ಗಳನ್ನು ಹಾಕದೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಈ ಎಲ್ಲಾ ಕೃತ್ಯಗಳಿಂದ ಸಂಘಕ್ಕೆ ಸುಮಾರು ₹6.86 ಕೋಟಿ ನಷ್ಟ ಉಂಟಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.ನ್ಯಾಯಾಲಯದ ಆದೇಶದಂತೆ ಎಫ್ಐಆರ್ಈ ಸಂಬಂಧ ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಅವರ ಪರವಾಗಿ ವಕೀಲ ರಾಜೇಶ್ ಕುಮಾರ್ ಅಮ್ಮಾಡಿ ವಾದ ಮಂಡಿಸಿದ್ದರು.ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಕಲಂ 316(5), 318(4), 336(3), 340(2) ಹಾಗೂ 3(5)ರ ಅಡಿಯಲ್ಲಿ ಪ್ರಕರಣ (ಅ.ಕ್ರ. 130/2026) ದಾಖಲಿಸಿಕೊಂಡಿದ್ದಾರೆ.









