ಪುತ್ತೂರು: ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ಮಂಗಳೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪುತ್ತೂರು ಕಾರ್ಯವ್ಯಾಪ್ತಿ) ಆದೇಶಿಸಿದೆ.ನೆಲ್ಯಾಡಿ ನಿವಾಸಿ ರವಿ ಅಲಿಯಾಸ್ ರವೀಂದ್ರ ಆಚಾರ್ಯ (32) ಶಿಕ್ಷೆಗೊಳಗಾದ ಆರೋಪಿ.ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ 2018ರಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಡಿ. ಮಂಜುನಾಥ್ ಅವರು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುಮಂಗಲ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆಯಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷ ಹೆಚ್ಚುವರಿ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದ್ದಾರೆ.ಅಲ್ಲದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506ರ ಅಡಿಯಲ್ಲಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷ ಹೆಚ್ಚುವರಿ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದ್ದು, ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿವೆ.ಸರ್ಕಾರಿ ಅಭಿಯೋಜಕ ಪುಷ್ಪರಾಜ್ ಅಡಂತ್ಯಾಯ ಅವರು ಸರ್ಕಾರದ ಪರವಾಗಿ ಸಮರ್ಥ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!