ಪುತ್ತೂರು: ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ನಂಬಿಸಿ ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಜಯರಾಮ ಎಂಬಾತನ ವಿರುದ್ಧ ಬಿಳಿನೆಲೆಯ ಯುವತಿಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ, ಜಮೀನಿನ ದಾಖಲೆಗಳ ಸಮಸ್ಯೆಯ ಕುರಿತು ತನ್ನ ಸಹಪಾಠಿ ಮಮತಾ ಅವರಲ್ಲಿ ತಿಳಿಸಿದ್ದರು. ಈ ಸಮಸ್ಯೆಯನ್ನು ಸರಿಪಡಿಸಿಕೊಡುವುದಾಗಿ ಮಮತಾ ಅವರ ಪತಿ ಜಯರಾಮ ಭರವಸೆ ನೀಡಿದ್ದ ಎನ್ನಲಾಗಿದೆ.ಆಗಸ್ಟ್ 24ರಂದು ಯುವತಿಯನ್ನು ಪುತ್ತೂರಿಗೆ ಕರೆಸಿಕೊಂಡ ಜಯರಾಮ, ಶಾಸಕರ ಕಚೇರಿಯಲ್ಲಿ ಶಾಸಕರು ಇಲ್ಲದ ಕಾರಣ ನೆಲ್ಲಿಗುಂಡಿಯಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಬಾಗಿಲು ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ವೇಳೆ ಬೊಬ್ಬೆ ಹಾಕಿ ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ.ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಜಯರಾಮ ಬೆದರಿಕೆ ಹಾಕಿದ್ದಾನೆ. ಬಳಿಕವೂ ಪದೇಪದೇ ಕಿರುಕುಳ ನೀಡಿ, ತನ್ನ ಬೇಡಿಕೆಗೆ ಒಪ್ಪುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.ಆರೋಪಿಯ ಬೆದರಿಕೆಯಿಂದಾಗಿ ಈವರೆಗೆ ದೂರು ನೀಡಿರಲಿಲ್ಲ. ಇದೀಗ ಮನೆಯವರಿಗೆ ವಿಷಯ ತಿಳಿಸಿ ದೂರು ನೀಡಿರುವುದಾಗಿ ಯುವತಿ ತಿಳಿಸಿದ್ದಾರೆ. ದೂರಿನ ಆಧಾರದಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!