ಪುತ್ತೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ ಸದ್ದಾಂ (34) ಎಂಬಾತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹75,000 ದಂಡ ವಿಧಿಸಿ ಮಂಗಳೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪುತ್ತೂರಿನಲ್ಲಿ ಕಾರ್ಯನಿರ್ವಹಣೆ) ತೀರ್ಪು ನೀಡಿದೆ.ಅಪ್ರಾಪ್ತ ಬಾಲಕಿಯ ಮನೆಗೆ ಬಂದು ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖಾಧಿಕಾರಿಯಾಗಿದ್ದ ಆಗಿನ ಉಪ್ಪಿನಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕೆ. ಅವರು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುಮಂಗಲ ಚಕಲಬ್ಬಿ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯ ಸೆಕ್ಷನ್ 5(ಎಲ್), 5(ಜೆ)(ii) ಹಾಗೂ 6ರ ಅಡಿಯಲ್ಲಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹50,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ಒಂದು ವರ್ಷ ಹೆಚ್ಚುವರಿ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ.ಅಲ್ಲದೆ, ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಒಂದು ವರ್ಷ ಹೆಚ್ಚುವರಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿವೆ.ಆರೋಪಿ ರೌಡಿಶೀಟರ್ಆರೋಪಿ ಸದ್ದಾಂ ಕಡಬ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 59/2011, 62/2020, 27/2021 ಮತ್ತು 105/2021 ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 101/2022ರ ಪ್ರಕರಣಗಳು ದಾಖಲಾಗಿವೆ.ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಪುಷ್ಪರಾಜ್ ಅಡಂತಾಯ ಅವರು ಸರ್ಕಾರದ ಪರವಾಗಿ ಸಮರ್ಥ ವಾದ ಮಂಡಿಸಿದ್ದರು.









