ಪುತ್ತೂರು: ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಹಿಂದೂ ಸಮಾಜವನ್ನು ಸಂಘಟಿಸಲು ಹಾಗೂ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ನಾರಾಯಣ ಪ್ರಕಾಶ್ ಹೇಳಿದರು.ಡಿಸೆಂಬರ್ ತಿಂಗಳಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಗಿರಿಜಾ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಡಗನ್ನೂರಿನ ದುರ್ಗಾ ಗಣೇಶ ಸಭಾಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸನಾತನ ಧರ್ಮದಲ್ಲಿ ಜನಿಸಿರುವ ನಾವೆಲ್ಲರೂ ಭಾಗ್ಯವಂತರು. ಅನೇಕತೆಯಲ್ಲಿ ಏಕತೆಯನ್ನು ಕಾಣುವ ಹಾಗೂ ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ವಿಶಾಲ ಮನೋಭಾವವನ್ನು ಹೊಂದಿರುವ ನಮ್ಮ ಧರ್ಮದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕು. ವಿವಿಧ ಕಾರಣಗಳಿಂದ ಹಿಂದೂ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇಂತಹ ಷಡ್ಯಂತ್ರಗಳ ವಿರುದ್ಧ ಸಮಾಜ ಒಗ್ಗಟ್ಟಿನಿಂದ ನಿಲ್ಲಬೇಕು. ಶ್ರೇಷ್ಠ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಧಾರ್ಮಿಕ ಶ್ರದ್ಧೆಯೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಧರ್ಮ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಾಧು-ಸಂತರ ಉಪಸ್ಥಿತಿಯಲ್ಲಿ ನಡೆಯಲಿರುವ ಕೇಸರಿ ಸಂಗಮದಲ್ಲಿ ಹಿಂದೂ ಸಮಾಜದ ಶಕ್ತಿ ಅನಾವರಣಗೊಳ್ಳಲಿದೆ. ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಶಿವ-ಪಾರ್ವತಿಯರ ಗಿರಿಜಾ ಕಲ್ಯಾಣೋತ್ಸವದಿಂದ ಲೋಕಕಲ್ಯಾಣವಾಗಲಿ. ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ಸಿಕ್ಕಿರುವುದು ಸೌಭಾಗ್ಯ. ಎರಡು ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ನಡೆಯಲಿರುವ ಅನ್ನಸಂತರ್ಪಣೆಗೆ ಧಾನ್ಯ ಹಾಗೂ ಇತರ ಸಾಮಗ್ರಿಗಳನ್ನು ನೀಡಿ ತನು, ಮನ, ಧನದಿಂದ ಸಹಕರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.ವೇದಿಕೆಯಲ್ಲಿ ಗಿರಿಜಾ ಕಲ್ಯಾಣೋತ್ಸವದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಘಾಟೆ, ಶ್ರೀನಿವಾಸ್ ಭಟ್ ಚಂದುಕುಡ್ಲು, ಮಲ್ಲಿಕಾ ಪ್ರಸಾದ್, ರಾಮಕೃಷ್ಣ ಭಟ್ ಹಾಗೂ ಲಿಂಗಪ್ಪ ಉಪಸ್ಥಿತರಿದ್ದರು.ರಾಮಕೃಷ್ಣ ಭಟ್ ಸ್ವಾಗತಿಸಿ, ಪ್ರಸಾದ್ ವಂದಿಸಿದರು.

Leave a Reply

Your email address will not be published. Required fields are marked *

You missed

Join WhatsApp Group
error: Content is protected !!