ಪುತ್ತೂರು: ಪಾರಂಪರಿಕ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾಲ್ಮರ ಆಯುರ್ವೇದ ಹರ್ಬಲ್ಸ್ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ನಾಟಿ ವೈದ್ಯ ಶಂಸುದ್ದೀನ್ ಸಾಲ್ಮರ ಅವರಿಗೆ 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಮಾಜಿಕ ಜವಾಬ್ದಾರಿ, ವೃತ್ತಿಬದ್ಧತೆ, ಕಾರ್ಯಕ್ಷಮತೆ, ವೈದ್ಯಕೀಯ ಅನುಭವ, ರೋಗಿಗಳೊಂದಿಗಿನ ಸ್ಪಂದನೆ, ಚಿಕಿತ್ಸಾ ಫಲಿತಾಂಶ ಹಾಗೂ ಮಾನವೀಯ ಮೌಲ್ಯಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಾಲ್ಮರ ಆಯುರ್ವೇದ ಹರ್ಬಲ್ಸ್ ಸಂಸ್ಥೆಯ ಮೂಲಕ ತಯಾರಿಸಲಾಗುವ ಸಾಲ್ಮರ ಪೈಲೋಕರ್ ಮೂಲವ್ಯಾಧಿ ಔಷಧಿ ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದೆ. ಪಾರಂಪರಿಕ ವೈದ್ಯಕೀಯ ಅನುಭವದೊಂದಿಗೆ ನೂರಾರು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿರುವ ಶಂಸುದ್ದೀನ್ ಅವರು, ಬಡ ರೋಗಿಗಳಿಗೂ ಅನುಕೂಲವಾಗುವಂತೆ ತಮ್ಮ ಚಿಕಿತ್ಸಾ ಪದ್ಧತಿ ಹಾಗೂ ಔಷಧಿಗಳ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ.
ತಮ್ಮದೇ ಸ್ವಂತ ಸಾಲ್ಮರ ಆಯುರ್ವೇದ ಹರ್ಬಲ್ಸ್ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದ್ದಾರೆ. ನುರಿತ ಬಿಎಎಂಎಸ್ ವೈದ್ಯರ ಸೇವೆಯೊಂದಿಗೆ ಪುತ್ತೂರು, ಬೆಂಗಳೂರು, ರಾಜಾಜಿನಗರ, ಮುಂಬೈ, ಮಹಾರಾಷ್ಟ್ರದ ಡೊಂಬಿವಲಿ, ಕೇರಳ ಹಾಗೂ ರಾಯಗಡ ಜಿಲ್ಲೆಗಳಲ್ಲಿ ಸಾಲ್ಮರ ಆಯುರ್ಧಾಮ ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.ಪ್ರತಿಷ್ಠಿತ ಸಾಲ್ಮರ ಮನೆತನದ ದಿವಂಗತ ಪಿ.ಎಸ್. ಅಹಮದ್ ಮತ್ತು ಆಯುಷಮ್ಮ ದಂಪತಿಯ ಪುತ್ರರಾಗಿರುವ ಶಂಸುದ್ದೀನ್ ಸಾಲ್ಮರ ಅವರು ಮೂರು ದಶಕಗಳಿಂದ ಪಾರಂಪರಿಕ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರಿಗೆ ಲಭಿಸಿವೆ. ಪ್ರಸ್ತುತ ಸಾಲ್ಮರ ಸೈಯದ್ ಮಲೆ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.ಪತ್ನಿ ನುಷನುಶ್ರತ್ ಹಾಗೂ ಪುತ್ರರಾದ ಸಾಫ್ಟ್‌ವೇರ್ ಇಂಜಿನಿಯರ್ ಸಲಿತ್ ಝಿಯಾನ್, ಎಂಜಿನಿಯರಿಂಗ್ ಪದವಿ ಬಳಿಕ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಆ್ಯಂಡ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಸಹೇಲ್ ಜಾಹಾದ್ ಮತ್ತು ಆಯುರ್ವೇದ ವೈದ್ಯಕೀಯ ಶಿಕ್ಷಣ ಪಡೆಯಲಿರುವ ಸಮೀಲ್ ಝಿಧಾನ್ ಅವರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.









