ಪುತ್ತೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಮನೆ ಬಾಗಿಲಿಗೆ ಆಹಾರ ಪದಾರ್ಥಗಳು, ತರಕಾರಿ, ದಿನಸಿ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ತಲುಪಿಸುವ ಆನ್‌ಲೈನ್ ಡೆಲಿವರಿ ಸೇವೆಗಳು ಜನಪ್ರಿಯವಾಗಿವೆ. ಇದೀಗ ಈ ಸೇವೆಗಳು ಸಣ್ಣ ನಗರಗಳು, ತಾಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿವೆ.

ಮೊಬೈಲ್‌ನಲ್ಲಿ ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಗ್ರಾಹಕರಿಗೆ ಅನುಕೂಲಕರವಾಗಿದೆ. ಗ್ರಾಹಕರನ್ನು ಸೆಳೆಯಲು ಹಾಗೂ ಇತರ ಕಂಪನಿಗಳಿಗಿಂತ ವೇಗವಾಗಿ ಸೇವೆ ನೀಡಲು ವಿವಿಧ ಡೆಲಿವರಿ ಕಂಪನಿಗಳು ಪೈಪೋಟಿ ನಡೆಸುತ್ತಿವೆ. ಆದರೆ ಈ ವೇಗದ ಪೈಪೋಟಿ ರಸ್ತೆ ಸುರಕ್ಷತೆಗೆ ಸವಾಲಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.ಪುತ್ತೂರಿನಂತಹ ಸಣ್ಣ ನಗರಗಳಲ್ಲಿ ಈಗಾಗಲೇ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ನಗರದ ಮುಖ್ಯ ರಸ್ತೆಗಳು ಮಾತ್ರವಲ್ಲದೆ ಕಿರಿದಾದ ಒಳರಸ್ತೆಗಳು, ಅಡ್ಡರಸ್ತೆಗಳು ಹಾಗೂ ಶಾಲಾ-ಕಾಲೇಜುಗಳಿರುವ ಪ್ರದೇಶಗಳಲ್ಲಿಯೂ ವಾಹನ ಸಂಚಾರ ನಿರಂತರವಾಗಿರುತ್ತದೆ. ಇಂತಹ ರಸ್ತೆಗಳಲ್ಲಿ ಡೆಲಿವರಿ ತಲುಪಿಸುವ ಆತುರದಲ್ಲಿ ಕೆಲವರು ಅತಿವೇಗವಾಗಿ ವಾಹನ ಚಲಾಯಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.ನಿಗದಿತ ಸಮಯದೊಳಗೆ ಆರ್ಡರ್ ತಲುಪಿಸಬೇಕೆಂಬ ಒತ್ತಡದಿಂದ ವಾಹನ ಸವಾರರು ವೇಗದ ಮಿತಿ ಮೀರಿ ಸಂಚರಿಸಿದರೆ ಪಾದಚಾರಿಗಳು, ಶಾಲಾ ಮಕ್ಕಳು ಹಾಗೂ ಇತರ ವಾಹನ ಸವಾರರಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಒಂದು ಕ್ಷಣದ ಅವಸರದಿಂದ ಸಂಭವಿಸುವ ಅಪಘಾತ ಕುಟುಂಬವೊಂದರ ಬದುಕನ್ನೇ ಕತ್ತಲೆಯಾಗಿಸಬಹುದು.ಡೆಲಿವರಿ ಸೇವೆಗಳು ಜನರಿಗೆ ಅನುಕೂಲ ಕಲ್ಪಿಸುವುದರಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವ ವೇಗಕ್ಕಿಂತ ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಡೆಲಿವರಿ ಕಂಪನಿಗಳು ತಮ್ಮ ಸಿಬ್ಬಂದಿಗೆ ಸುರಕ್ಷಿತ ವಾಹನ ಚಾಲನೆ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಸಮಯದ ಗುರಿ ಸಾಧಿಸುವ ಒತ್ತಡವನ್ನು ಕಡಿಮೆ ಮಾಡಬೇಕು. ಸಂಚಾರಿ ಪೊಲೀಸರು ಕೂಡ ಇಂತಹ ಅತಿವೇಗದ ವಾಹನಗಳ ಸಂಚಾರದ ಬಗ್ಗೆ ಗಮನಹರಿಸಬೇಕಿದೆ.ಗ್ರಾಹಕರಿಗೆ ಸೇವೆ ನೀಡುವ ಆತುರದಲ್ಲಿ ಸಾರ್ವಜನಿಕರ ಜೀವಕ್ಕೆ ಅಪಾಯವಾಗಬಾರದು. ವೇಗದ ಡೆಲಿವರಿಗೆ ಕಡಿವಾಣ ಹಾಕುವವರು ಯಾರು? ಸಂಬಂಧಪಟ್ಟ ಕಂಪನಿಗಳು ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!