ಪುತ್ತೂರು: ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಗ್ರಾಮ ಗ್ರಾಮಗಳಿಗೆ ತೆರಳಿ ಅಕ್ರಮ ಸಕ್ರಮ ಬೈಠಕ್ ನಡೆಸಲಾಗುತ್ತಿದೆ. ಈಗಾಗಲೇ 2 ಸಾವಿರಕ್ಕೂ ಅಧಿಕ ಮಂದಿಗೆ ಭೂಮಿ ಮಂಜೂರು ಮಾಡಲಾಗಿದ್ದು, ಅಕ್ರಮ ಸಕ್ರಮ ಯೋಜನೆಯ ಅನುಷ್ಠಾನದಲ್ಲಿ ಪುತ್ತೂರು ಕ್ಷೇತ್ರ ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.ಬೆಟ್ಟಂಪಾಡಿಯಲ್ಲಿ ನಡೆದ 30ನೇ ಅಕ್ರಮ ಸಕ್ರಮ ಬೈಠಕ್‌ನಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಸಕ್ರಮ ಪ್ರಕ್ರಿಯೆ ಸಮರ್ಪಕವಾಗಿ ನಡೆದಿರಲಿಲ್ಲ. ಕಚೇರಿಯ ನಾಲ್ಕು ಗೋಡೆಗಳ ಮಧ್ಯೆಯೇ ಈ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಈಗ ಜನರ ಬಳಿಗೇ ತೆರಳಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಅಕ್ರಮ ಸಕ್ರಮ ಪ್ರಕ್ರಿಯೆ ನಡೆಯುತ್ತಿಲ್ಲವೇಕೆ ಎಂದು ಜನರು ಪ್ರಶ್ನಿಸಬೇಕು ಎಂದರು.ಗ್ರಾಮಗಳ ಪ್ರತಿಯೊಂದು ಮನೆಗೂ ಫಿಲ್ಟರ್ ನೀರು ವಿತರಿಸುವ ಯೋಜನೆಯ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಮೆಡಿಕಲ್ ಕಾಲೇಜು ತರುವುದಾಗಿ ಭರವಸೆ ನೀಡಿದ್ದೆ, ಅದರಂತೆ ಕಾಲೇಜು ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಮೆಡಿಕಲ್ ಕಾಲೇಜು ಆರಂಭವಾದ ಬಳಿಕ ಪುತ್ತೂರಿನ ಚಿತ್ರಣವೇ ಬದಲಾಗಲಿದೆ. ಸರ್ವ ಧರ್ಮಗಳ ಆರಾಧನಾ ಕೇಂದ್ರಗಳಿಗೂ ಅನುದಾನ ನೀಡಲಾಗಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ತಲಾ 6ರಿಂದ 7 ಕೋಟಿ ರೂ. ಅನುದಾನ ನೀಡಲಾಗಿದೆ. ಪಾಣಾಜೆ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿಯಾಗಿ 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಎಲ್ಲಾ ಸಮಾಜಗಳ ಸಂಘಟನೆಗಳಿಗೆ ನಿವೇಶನ ಮಂಜೂರು ಮಾಡಿಸುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಯುತ್ತಿದೆ. ಮಕ್ಕಳು ಮತ್ತು ಯುವಜನರ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ತಾಲೂಕು ಕ್ರೀಡಾಂಗಣ ನಿರ್ಮಾಣದ ಕೆಲಸವೂ ನಡೆಯುತ್ತಿದೆ ಎಂದರು.ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು, ಯುವಕರಿಗೆ ಉದ್ಯೋಗ ದೊರೆಯಬೇಕು ಎಂಬ ಧ್ಯೇಯದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸಾಧನೆ ಮಾಡಲು ಆಸಕ್ತಿ ಮತ್ತು ಇಚ್ಛಾಶಕ್ತಿ ಮಾತ್ರ ಮುಖ್ಯ. ರಾತ್ರಿ ಒಂದು ಗಂಟೆಯಾದರೂ ಗುದ್ದಲಿಪೂಜೆಗೆ ತೆರಳಿದಾಗ ಜನರಿಂದ ಬೆಂಬಲ ದೊರೆಯುತ್ತಿರುವುದು ಸಂತಸ ತಂದಿದೆ. ಅಭಿವೃದ್ಧಿಪರ ಮತ ಚಲಾವಣೆಯಾದಾಗ ಮಾತ್ರ ನಮ್ಮ ಊರಿನ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅಶೋಕ್ ರೈ ಹೇಳಿದರು.

Leave a Reply

Your email address will not be published. Required fields are marked *

You missed

Join WhatsApp Group
error: Content is protected !!