ಪುತ್ತೂರು: ನಗರದ ಮಯೂರ ಇನ್ಲ್ಯಾಂಡ್ ಸಂಕೀರ್ಣದಲ್ಲಿ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ವ್ಯವಹಾರ ಮಾಡುವುದು ಎಲ್ಲರೂ ಮಾಡುತ್ತಾರೆ. ಆದರೆ, ವ್ಯವಹಾರದ ಜತೆಗೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದು ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ವಿಶೇಷ ಕಾರ್ಯವಾಗಿದೆ ಎಂದರು.ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡುವುದರ ಜತೆಗೆ ಸಂಸ್ಥೆಯ ಘನತೆಯನ್ನು ಹೆಚ್ಚಿಸುವ ಕಾರ್ಯಗಳನ್ನು ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಮಾಡುತ್ತಿದೆ. ಗ್ರಾಹಕರನ್ನು ದೇವರಂತೆ ಕಾಣುವ ಮನೋಭಾವ ಪ್ರತಿಯೊಂದು ಸಂಸ್ಥೆಯಲ್ಲೂ ಇರಬೇಕು. ಕೆಲವು ಕಡೆ ಗ್ರಾಹಕರು ಅವಮಾನವನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಇದ್ದರೂ, ಈ ಸಂಸ್ಥೆಯು ಗ್ರಾಹಕರೊಂದಿಗೆ ಪ್ರೀತಿಯಿಂದ ವ್ಯವಹರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಮಾತನಾಡಿ, ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಪ್ರತಿಯೊಬ್ಬರೂ ತಮ್ಮ ಕಾರ್ಯಗಳ ಮೂಲಕ ವ್ಯಕ್ತಪಡಿಸಬೇಕು. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸುವಂತೆಯೇ ಸೆಪ್ಟೆಂಬರ್ 18ರಂದು ತುಳು ಭಾಷಾ ದಿನಾಚರಣೆ ನಡೆಸುವ ಕುರಿತು ಉಸ್ತುವಾರಿ ಸಚಿವರು ಘೋಷಿಸಿರುವುದು ಸಂತಸದ ವಿಚಾರವಾಗಿದೆ. ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿಯು ವಸ್ತುನಿಷ್ಠ ಚಿಂತನೆ ಮತ್ತು ಜನಪರ ಕಾಳಜಿಯೊಂದಿಗೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇದನಾಥ ಸುವರ್ಣ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್ಗಳು, ವಿದ್ಯಾವಂತರು ಹಾಗೂ ದೇವಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವುಗಳಿಂದ ಯುವಜನತೆಗೆ ಉದ್ಯೋಗಾವಕಾಶಗಳು ಲಭಿಸುತ್ತಿವೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆದು ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇದನಾಥ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರಿಗೆ ಕನ್ನಡ ಧ್ವಜ ಹಾಗೂ ಬಣ್ಣದ ಶಾಲು ನೀಡಿ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿಯ ಅಂಗಸಂಸ್ಥೆಯಾದ ದ.ಕ. ಬೆಳೆಗಾರರ ಸಾವಯವ ಸಂಯುಕ್ತ ರೈತ ಉತ್ಪಾದಕ ಕಂಪನಿ, ವಿಟ್ಲ ಶಾಖೆಯ ವ್ಯವಸ್ಥಾಪಕ ಚೇತನ್ ಕುಮಾರ್ ಗೌರವಿಸಿದರು.ಸಂಸ್ಥೆಯ ಗ್ರಾಹಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಜ್ಯೋತಿಕಿರಣ ಪ್ರಾರ್ಥಿಸಿದರು. ಶಾಖಾ ಅಧ್ಯಕ್ಷ ಪುನೀತ್ ವಿಜೆ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.









