ಪುತ್ತೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿವಿಧ ನಿರ್ಧಾರಗಳು ರೈತರು, ಹೈನುಗಾರರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರ ಬದುಕಿನ ಮೇಲೆ ಆರ್ಥಿಕ ಹೊರೆ ಹೆಚ್ಚಿಸುತ್ತಿವೆ. ಸರ್ಕಾರ ಯೋಜನೆಗಳನ್ನು ಘೋಷಿಸುವುದಷ್ಟೇ ಅಲ್ಲದೆ, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೂ ಆದ್ಯತೆ ನೀಡಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಘೋಷಿಸಿರುವ ₹2,500 ಪರಿಹಾರ ಪಡೆಯಲು ಹಲವು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಬೆಳೆ ವಿಮೆ ವಿಚಾರದಲ್ಲೂ ಗೊಂದಲಗಳಿದ್ದು, ಸಮಸ್ಯೆ ಪರಿಹಾರಕ್ಕೆ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಸೂಕ್ತ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಮತ್ತು ಪ್ರತಿಭಟನೆಗಳು ಆರಂಭವಾಗಿವೆ.
ಇದೀಗ ಪುತ್ತೂರು ಸೇರಿದಂತೆ ಜಿಲ್ಲೆಯ ಬರಪೀಡಿತ ಪ್ರದೇಶಗಳ ರೈತರಿಗೆ ಪರಿಹಾರ ತಲುಪಿಸುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಅಡಿಕೆ, ತೆಂಗು, ರಬ್ಬರ್, ಕಾಳುಮೆಣಸು ಸೇರಿದಂತೆ ವಿವಿಧ ಬೆಳೆಗಳ ಕೃಷಿ ವೆಚ್ಚ ಹೆಚ್ಚಳದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆ ಸಮೀಕ್ಷೆ, ಆಧಾರ್ ಜೋಡಣೆ ಹಾಗೂ ಪಹಣಿ ದಾಖಲೆಗಳಲ್ಲಿನ ವ್ಯತ್ಯಾಸಗಳಿಂದ ಅರ್ಹ ರೈತರಿಗೆ ಪರಿಹಾರ ಸಿಗದೆ ಹೋಗಬಾರದು. ದಾಖಲೆಗಳಲ್ಲಿ ದೋಷಗಳಿದ್ದರೆ ಅಧಿಕಾರಿಗಳೇ ಸ್ಥಳೀಯವಾಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು. ಪರಿಹಾರ ನೀಡುವ ಉದ್ದೇಶ ರೈತರಿಗೆ ನೆರವಾಗುವುದೇ ಹೊರತು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವುದಲ್ಲ ಎಂದು ಹೇಳಿದ್ದಾರೆ.ಹಾಲು ದರ ಏರಿಕೆಯಿಂದ ಗ್ರಾಹಕರಿಗೂ ಹೊರೆನವೆಂಬರ್ 1ರಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ ₹8 ಹೆಚ್ಚಳ ಮಾಡಲಾಗಿದೆ. ಇದರಲ್ಲಿ ₹7 ಹೈನುಗಾರರಿಗೆ ಹಾಗೂ ₹1 ಹಾಲು ಒಕ್ಕೂಟಗಳಿಗೆ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಹೈನುಗಾರರಿಗೆ ಉತ್ತಮ ದರ ಸಿಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹಾಲು ಖರೀದಿಸುವ ಸಾಮಾನ್ಯ ಕುಟುಂಬಗಳ ಆರ್ಥಿಕ ಸ್ಥಿತಿಯನ್ನೂ ಸರ್ಕಾರ ಪರಿಗಣಿಸಬೇಕು. ಪಶು ಆಹಾರ, ಮೇವು, ಪಶುವೈದ್ಯಕೀಯ ಹಾಗೂ ಕಾರ್ಮಿಕರ ವೆಚ್ಚ ಹೆಚ್ಚಳದಿಂದ ಹೈನುಗಾರರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಹೈನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದರ ಜತೆಗೆ ಗ್ರಾಹಕರ ಮೇಲಿನ ಬೆಲೆ ಏರಿಕೆಯ ಹೊರೆಯನ್ನೂ ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದಾರೆ.ಬಸ್ ಪ್ರಯಾಣ ದರ ಏರಿಕೆ ಗ್ರಾಮೀಣ ಜನರಿಗೆ ಹೊರೆಯಾಗಲಿದೆನವೆಂಬರ್ 5ರಿಂದ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ ಸೇರಿದಂತೆ ಗ್ರಾಮೀಣ ಪ್ರದೇಶಗಳ ಜನರು ಶಿಕ್ಷಣ, ಉದ್ಯೋಗ ಹಾಗೂ ವ್ಯಾಪಾರಕ್ಕಾಗಿ ಪ್ರತಿದಿನ ಬಸ್‌ಗಳನ್ನು ಅವಲಂಬಿಸಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ದರ ಏರಿಕೆ ನೇರ ಪರಿಣಾಮ ಬೀರಲಿದೆ.ಈಗಾಗಲೇ ಕುಟುಂಬಗಳ ಖರ್ಚು ಹೆಚ್ಚಾಗಿರುವ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳ ಮತ್ತಷ್ಟು ಹೊರೆಯಾಗಲಿದೆ. ಸಾರಿಗೆ ಸಂಸ್ಥೆಗಳ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯವಾದರೂ ಅದರ ಸಂಪೂರ್ಣ ಹೊರೆಯನ್ನು ಪ್ರಯಾಣಿಕರ ಮೇಲೆ ಹಾಕಬಾರದು. ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಪ್ರಯಾಣಿಕರ ಹಿತದೃಷ್ಟಿಯಿಂದ ಪರ್ಯಾಯ ಕ್ರಮಗಳನ್ನು ಸರ್ಕಾರ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.ಗ್ರಾಮೀಣ ಸಮಸ್ಯೆಗಳಿಗೆ ಆದ್ಯತೆ ನೀಡಲಿರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಪ್ರಚಾರ ನಡೆಯುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸಮರ್ಪಕ ಬಸ್ ಸೌಲಭ್ಯ, ರೈತರಿಗೆ ಬೆಳೆ ಪರಿಹಾರ, ಹೈನುಗಾರರಿಗೆ ನ್ಯಾಯಯುತ ಆದಾಯ, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದರ ಹಾಗೂ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ವಸ್ತುಗಳು ದೊರೆಯುವುದೂ ಅಷ್ಟೇ ಮುಖ್ಯ.ದಕ್ಷಿಣ ಕನ್ನಡ ಜಿಲ್ಲೆಯ ರೈತರು ಅಡಿಕೆ, ತೆಂಗು, ರಬ್ಬರ್, ಕಾಳುಮೆಣಸು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ನಂಬಿ ಬದುಕುತ್ತಿದ್ದಾರೆ. ಕೃಷಿ ವೆಚ್ಚ ಹೆಚ್ಚಳ, ಮಾರುಕಟ್ಟೆ ದರಗಳ ಏರಿಳಿತ, ಕಾರ್ಮಿಕರ ಕೊರತೆ ಹಾಗೂ ಹವಾಮಾನ ವೈಪರೀತ್ಯಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಸರ್ಕಾರ ಆದ್ಯತೆಯ ಮೇರೆಗೆ ಪರಿಹಾರ ನೀಡಬೇಕು.ಸರ್ಕಾರಕ್ಕೆ ಜನರ ಬದುಕು ಮುಖ್ಯವಾಗಬೇಕು. ಯೋಜನೆಗಳ ಘೋಷಣೆಗಿಂತ ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರು, ಹೈನುಗಾರರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ಆಡಳಿತಕ್ಕೆ ಸರ್ಕಾರ ಮುಂದಾಗಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.









