ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಎಂಡಿಎಂಎ (MDMA) ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕುಳಾಯಿ ಗುಡ್ಡೆ ಪರಿಸರದಲ್ಲಿರುವ ಮನೆಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಜೂನ್ 25ರಂದು ದಾಳಿ ನಡೆಸಿದರು. ಈ ವೇಳೆ ಅಣ್ಣಪ್ಪ ಸ್ವಾಮಿ @ ಮನು (26) ಎಂಬಾತನನ್ನು ಬಂಧಿಸಿ, ಆತನಿಂದ ಸುಮಾರು ₹1.50 ಲಕ್ಷ ಮೌಲ್ಯದ 15 ಗ್ರಾಂ ಎಂಡಿಎಂಎ, ಒಂದು ಮೊಬೈಲ್ ಫೋನ್, ಜಿಪ್ ಲಾಕ್ ಕವರ್ ಹಾಗೂ ಡಿಜಿಟಲ್ ತೂಕಮಾಪನ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹2,10,500 ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಂಧಿತ ಅಣ್ಣಪ್ಪ ಸ್ವಾಮಿ @ ಮನು ವಿರುದ್ಧ ಈ ಹಿಂದೆ ಪಣಂಬೂರು ಹಾಗೂ ಬಜಪೆ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಪ್ರಕರಣಗಳು, ಸುರತ್ಕಲ್ ಠಾಣೆಯಲ್ಲಿ ಹಲ್ಲೆ ಹಾಗೂ ಮಸೀದಿಗೆ ಕಲ್ಲು ಎಸೆದ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಮಂಗಳೂರು ನಗರ ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ್ದು, ಈ ಮಾದಕವಸ್ತು ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!