ರಾಜ್ಯಾದ್ಯಂತ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ವೈದ್ಯಾಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಅವರ ಸ್ಥಳದಿಂದ ತೆರವುಗೊಳಿಸಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (DHO) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಿ ಸಾರ್ವಜನಿಕರಿಗೆ ನಿರಂತರ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಇತ್ತೀಚೆಗೆ 300ಕ್ಕೂ ಹೆಚ್ಚು ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿತ್ತು. ಇಲಾಖೆಯ ಇತಿಹಾಸದಲ್ಲೇ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಗುತ್ತಿಗೆ ವೈದ್ಯರನ್ನು ನೇಮಿಸಿದ್ದು ಇದೇ ಮೊದಲು ಎಂದು ತಿಳಿಸಿರುವ ಸಚಿವರು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಸ್ಥಿರತೆ ಕಾಪಾಡುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದಿದ್ದಾರೆ.
ಕಡ್ಡಾಯ ವೈದ್ಯಕೀಯ ಸೇವೆ (Compulsory Medical Services) ಅಡಿಯಲ್ಲಿ ನಿಯೋಜನೆಗೊಳ್ಳುವ ಹೊಸ ವೈದ್ಯಾಧಿಕಾರಿಗಳು ಬಂದರೆಂಬ ಕಾರಣಕ್ಕೆ, ಈಗಾಗಲೇ ಕರ್ತವ್ಯದಲ್ಲಿರುವ ಗುತ್ತಿಗೆ ವೈದ್ಯರನ್ನು ಅಲ್ಲಿಂದ ತೆರವುಗೊಳಿಸುವುದು ಅಥವಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಗುತ್ತಿಗೆ ವೈದ್ಯರು ತಾವು ಕರ್ತವ್ಯ ಸಲ್ಲಿಸುತ್ತಿರುವ ಸ್ಥಳದಲ್ಲೇ ಮುಂದುವರಿಯಲಿದ್ದು, ಅವರು ಜಾಗ ಖಾಲಿ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿಯಮವನ್ನು ಉಲ್ಲಂಘಿಸಿ ಗುತ್ತಿಗೆ ವೈದ್ಯರಿಗೆ ತೊಂದರೆ ನೀಡುವುದು ಅಥವಾ ಅವರನ್ನು ಬಿಡುಗಡೆಗೊಳಿಸುವುದು ಕಂಡುಬಂದಲ್ಲಿ ಸಂಬಂಧಪಟ್ಟ ಜಿಲ್ಲಾ ಆರೋಗ್ಯಾಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಇಂತಹ ಪ್ರಕರಣಗಳು ಎದುರಾದರೆ ನೇರವಾಗಿ ಇಲಾಖೆಯ ಆಯುಕ್ತಾಲಯಕ್ಕೆ ಮಾಹಿತಿ ರವಾನಿಸುವಂತೆ ಅವರು ಸೂಚಿಸಿದ್ದಾರೆ.









