ಸರ್ಕಾರಿ ಉದ್ಯೋಗವಿದ್ದರೆ ಜೀವನದಲ್ಲಿ ಭದ್ರತೆ ಇರುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ, ಸರ್ಕಾರಿ ನೌಕರರು (Government Employees) ಮಾಡುವ ಒಂದಷ್ಟು ತಪ್ಪುಗಳು ಅವರ ಉದ್ಯೋಗದ ಮೇಲೆಯೇ ಗಂಭೀರ ಪರಿಣಾಮ ಬೀರಬಹುದು. ಅದರಲ್ಲೂ ಯಾವುದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ (Arrest) 48 ಗಂಟೆಗಳಿಗೂ ಹೆಚ್ಚು ಕಾಲ ಜೈಲು (Jail) ಅಥವಾ ಪೊಲೀಸ್ ಕಸ್ಟಡಿಯಲ್ಲಿದ್ದರೆ (Police Custody), ಅಂತಹ ನೌಕರರನ್ನು ಪ್ರತ್ಯೇಕ ಆದೇಶವಿಲ್ಲದೆಯೂ ಅಮಾನತುಗೊಂಡಂತೆ (Suspension) ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನ್ಮೋಹನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಸ್ಪಷ್ಟನೆ ನೀಡಿದೆ. ಬಿಹಾರದ ಸಮಸ್ತಿಪುರ ಸದರ್ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು, ವೇತನ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದರು. ಸುಮಾರು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ನಂತರ ಸೆಷನ್ಸ್ ಕೋರ್ಟ್ ಜಾಮೀನು ನೀಡಿತ್ತು. ಆದರೆ, ಈ ಜಾಮೀನನ್ನು ಪ್ರಶ್ನಿಸಿ ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಹೈಕೋರ್ಟ್ ಜಾಮೀನು ರದ್ದುಗೊಳಿಸಿ ಮತ್ತೆ ಕಸ್ಟಡಿಗೆ ಒಪ್ಪಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಉದ್ಯೋಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಸೆಷನ್ಸ್ ಕೋರ್ಟ್ ನೀಡಿದ್ದ ಜಾಮೀನನ್ನು ಮರುಸ್ಥಾಪಿಸಿತು. ಇದರೊಂದಿಗೆ, ಸರ್ಕಾರಿ ನೌಕರನೊಬ್ಬ ಬಂಧನಕ್ಕೊಳಗಾಗಿ 48 ಗಂಟೆಗಳಿಗಿಂತ ಹೆಚ್ಚು ಕಾಲ ಕಸ್ಟಡಿಯಲ್ಲಿದ್ದರೆ, ನಿಯಮದ ಪ್ರಕಾರ ಆತ ಸ್ವಯಂಚಾಲಿತವಾಗಿ ಅಮಾನತುಗೊಂಡಂತೆ ಪರಿಗಣಿಸಲ್ಪಡುತ್ತಾನೆ ಎಂದು ಸ್ಪಷ್ಟಪಡಿಸಿತು. ಇದಕ್ಕೆ ಯಾವುದೇ ಪ್ರತ್ಯೇಕ ಅಮಾನತು ಆದೇಶದ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಬಂಧನದ ಬಳಿಕ ಅಮಾನತುಗೊಂಡಿದ್ದ ಈ ಉದ್ಯೋಗಿಯ ಅಮಾನತನ್ನು ಕೆಲವೇ ದಿನಗಳಲ್ಲಿ ತೆರವುಗೊಳಿಸಿ, ಮತ್ತೆ ಅದೇ ಆಸ್ಪತ್ರೆಯಲ್ಲಿ ಅದೇ ಹುದ್ದೆಗೆ ನೇಮಕ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ. ಈ ವಿಚಾರವನ್ನು ತಕ್ಷಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಹಾರ ಸರ್ಕಾರಕ್ಕೆ ಸೂಚನೆ ನೀಡಿದೆ. 48 ಗಂಟೆಗಳಿಗೂ ಹೆಚ್ಚು ಕಾಲ ಕಸ್ಟಡಿಯಲ್ಲಿರುವುದು ಅಮಾನತು ನಿಯಮಕ್ಕೆ ಒಳಪಟ್ಟಿರುತ್ತದೆಯಾದರೂ, ಇದು ಎಲ್ಲ ಪ್ರಕರಣಗಳಲ್ಲೂ ನೇರವಾಗಿ ಉದ್ಯೋಗ ಕಳೆದುಕೊಳ್ಳುವುದು ಅಥವಾ ಸೇವೆಯಿಂದ ವಜಾಗೊಳಿಸುವುದು ಎಂದರ್ಥವಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!