ಐದು ಕೋಳಿಗಳು, ಕತ್ತಿ ಹಾಗೂ ₹1,030 ನಗದು ವಶಕ್ಕೆ
ಕಡಬ: ಚಾರ್ವಾಕ ಗ್ರಾಮದ ಬೀರೋಳಿಗೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿಅಂಕದ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಕಡಬ ಪೊಲೀಸರು ನ.9ರಂದು ಸಂಜೆ ದಾಳಿ ನಡೆಸಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಕಡಬ ಪೊಲೀಸ್ ಠಾಣೆಯ ಪ್ರಭಾರ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರಿಗೆ ದೊರೆತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಗುಂಪಾಗಿ ಸೇರಿದ್ದ ಕೆಲವರು ಹಣವನ್ನು ಪಣವಾಗಿಟ್ಟು ಕೋಳಿಅಂಕದ ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಜೂಜಾಟದಲ್ಲಿ ತೊಡಗಿದ್ದವರು ಓಡಿಹೋಗಿದ್ದು, ಈ ವೇಳೆ ಚಾರ್ವಾಕ ನಿವಾಸಿ ಬಾಲಕೃಷ್ಣ (46) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತನ ಬಳಿಯಿಂದ ಜೂಜಾಟದಿಂದ ಗಳಿಸಿದ ₹1,030 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಸ್ಥಳದಲ್ಲಿದ್ದ ಐದು ಅಂಕದ ಕೋಳಿಗಳು ಹಾಗೂ ಕೋಳಿಅಂಕಕ್ಕೆ ಬಳಸುತ್ತಿದ್ದ ಕತ್ತಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ತನಿಖೆ ಮುಂದುವರಿದಿದೆ.









