ಮಂಗಳೂರು : ಬೆಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ಕರ್ನಾಟಕ ಕರಾವಳಿಯ ಮೂಲಕ ಸಂಚರಿಸಲಿರುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಧಾನಿ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬೆಂಗಳೂರು ಮತ್ತು ಕರಾವಳಿ ಭಾಗವನ್ನು ವಂದೇ ಭಾರತ್ ರೈಲಿನ ಮೂಲಕ ಸಂಪರ್ಕಿಸುವ ಯೋಜನೆ ಹಲವು ವರ್ಷಗಳ ಹಿಂದೆಯೇ ರೂಪುಗೊಂಡಿತ್ತು. 2019ರಲ್ಲಿ ಅಂದಿನ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಬೆಂಗಳೂರಿಗೆ ವಂದೇ ಭಾರತ್ ರೈಲು ಆರಂಭಿಸುವ ಆಶಯ ವ್ಯಕ್ತಪಡಿಸಿದ್ದರು. ಆದರೆ ಸಕಲೇಶಪುರ–ಸುಬ್ರಹ್ಮಣ್ಯ ಘಾಟ್ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳದ ಕಾರಣ ಯೋಜನೆ ಮುಂದೂಡಿಕೆಯಾಗಿತ್ತು.
ನಂತರ ಕಾರವಾರ–ಮಂಗಳೂರು–ಬೆಂಗಳೂರು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ಹಿನ್ನೆಲೆಯಲ್ಲಿ ಯೋಜನೆಗೆ ಮತ್ತೆ ವೇಗ ದೊರೆಯಿತು. ಕಳೆದ ವರ್ಷ ಮಂಗಳೂರು ಭೇಟಿ ವೇಳೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರು–ಮಂಗಳೂರು ಮಾರ್ಗವಾಗಿ ಮಡಗಾಂವ್‌ವರೆಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ನಿರ್ಧಾರ ಪ್ರಕಟಿಸಿದ್ದರು.
ಈಗಾಗಲೇ ಮಂಗಳೂರು–ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಬೆಂಗಳೂರು–ಮಂಗಳೂರು ಮಾರ್ಗದಲ್ಲಿಯೂ ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ.
ಬೆಂಗಳೂರು, ಮಂಗಳೂರು, ಉಡುಪಿ ಹಾಗೂ ಕಾರವಾರ ಸೇರಿದಂತೆ ಕರಾವಳಿ ಭಾಗದ ಪ್ರಯಾಣಿಕರಿಗೆ ಈ ರೈಲು ಅನುಕೂಲ ಕಲ್ಪಿಸಲಿದ್ದು, ಕರ್ನಾಟಕದ ರಾಜಧಾನಿಯನ್ನು ಗೋವಾದೊಂದಿಗೆ ವೇಗದ ರೈಲು ಸಂಪರ್ಕದ ಮೂಲಕ ಬೆಸೆಯಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.









