ಪುತ್ತೂರು: ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ನವೆಂಬರ್ 14ರಂದು ಪುತ್ತೂರಿನಲ್ಲಿ ಮಧುಮೇಹ ಜಾಗೃತಿ ಜಾಥಾ, ಉಚಿತ ರಕ್ತದ ಸಕ್ಕರೆ ಪರೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ರೋಟರಿ ಕ್ಲಬ್ ಪುತ್ತೂರು ಮತ್ತು ಡಾ. ನಜೀರ್ಸ್ ಡಯಾಬಿಟಿಸ್ ಸೆಂಟರ್ ಪುತ್ತೂರು ಇವರ ಸಹಯೋಗದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ವರ್ಷದ ವಿಶ್ವ ಮಧುಮೇಹ ದಿನದ ಜಾಗತಿಕ ಅಭಿಯಾನದ ವಿಷಯ ‘Early Action on Diabetes’ (ಮಧುಮೇಹದ ವಿರುದ್ಧ ಆರಂಭಿಕ ಕ್ರಮ) ಆಗಿದ್ದು, ಮಧುಮೇಹವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು, ಸೂಕ್ತ ಚಿಕಿತ್ಸೆ ಪಡೆಯುವುದು ಹಾಗೂ ಆರೋಗ್ಯಕರ ಜೀವನಶೈಲಿಯ ಮೂಲಕ ತೊಡಕುಗಳನ್ನು ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ನ.14ರಂದು ಬೆಳಿಗ್ಗೆ 7.30ಕ್ಕೆ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಜಾಗೃತಿ ಜಾಥಾ ಆರಂಭವಾಗಲಿದೆ. ಎಪಿಎಂಸಿ ರಸ್ತೆ, ಮುಖ್ಯ ರಸ್ತೆ ಹಾಗೂ ಶ್ರೀಧರ ಭಟ್ ಸ್ಟೋರ್ ಮೂಲಕ ಸಾಗುವ ಜಾಥಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.
ಬಳಿಕ ಸಾರ್ವಜನಿಕರಿಗೆ ಉಚಿತ ರಕ್ತದ ಸಕ್ಕರೆ ಪರೀಕ್ಷೆ (GRBS) ಮತ್ತು ದೀರ್ಘಕಾಲೀನ ರಕ್ತದ ಸಕ್ಕರೆ ನಿಯಂತ್ರಣದ ಮಟ್ಟ ತಿಳಿಸುವ HbA1c ಪರೀಕ್ಷೆ ನಡೆಸಲಾಗುವುದು. ಬೆಳಿಗ್ಗೆ 8.30ಕ್ಕೆ ಆಸ್ಪತ್ರೆ ಆವರಣದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಕ್ಕಳ ಸಮ್ಮಿಲನ ವಿಶೇಷ ಆಕರ್ಷಣೆ
ಈ ಬಾರಿಯ ಕಾರ್ಯಕ್ರಮದಲ್ಲಿ ಟೈಪ್-1 ಮಧುಮೇಹ ಹೊಂದಿರುವ ಮಕ್ಕಳಿಗೆ ನೆರವು ನೀಡುವ ಉದ್ದೇಶದಿಂದ ಆರಂಭಿಸಿರುವ ‘ಪ್ರಾಜೆಕ್ಟ್ ಸ್ವೀಟ್ ಚೈಲ್ಡ್’ ಯೋಜನೆಯಡಿ ಮಕ್ಕಳ ಸಮ್ಮಿಲನ ಆಯೋಜಿಸಲಾಗಿದೆ. ಯೋಜನೆಯಿಂದ ನೆರವು ಪಡೆಯುತ್ತಿರುವ ಮಕ್ಕಳು ಹಾಗೂ ಅವರ ಕುಟುಂಬದವರು ಪರಸ್ಪರ ಭೇಟಿಯಾಗಿ ಅನುಭವ ಹಂಚಿಕೊಳ್ಳಲು ಮತ್ತು ಪ್ರೋತ್ಸಾಹ ಪಡೆಯಲು ಈ ಸಮ್ಮಿಲನ ವೇದಿಕೆಯಾಗಲಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹಾಗೂ ಮಧುಮೇಹ ನಿರ್ವಹಣೆಯಲ್ಲಿ ಕುಟುಂಬದ ಪಾತ್ರವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.
ರೋಟರಿ ಕ್ಲಬ್ ಪುತ್ತೂರಿನ ಅಧ್ಯಕ್ಷ ರೊ. ದತ್ತಾತ್ರೇಯ ರಾವ್ ಹಾಗೂ ಕಾರ್ಯದರ್ಶಿ ರೊ. ಲೊವೆಲ್ ಮೇವಾಡ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಡಾ. ನಜೀರ್ ಅಹಮದ್ ಕೆ. ಸಂಯೋಜಕರಾಗಿದ್ದಾರೆ.
ಇನ್ನರ್ ವೀಲ್ ಕ್ಲಬ್ ಪುತ್ತೂರು, ಭಾರತೀಯ ವೈದ್ಯಕೀಯ ಸಂಘ (IMA) ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು, ಹಾಸ್ಪಿಟಲ್ ಅಸೋಸಿಯೇಷನ್ ಪುತ್ತೂರು, ಡಾಕ್ಟರ್ಸ್ ಫೋರಂ ಪುತ್ತೂರು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಪುತ್ತೂರು ಹಾಗೂ ಎಂಡೋಕ್ರೈನಾಲಜಿ ಡಯಾಬಿಟಿಸ್ ರಿಸರ್ಚ್ ಟ್ರಸ್ಟ್ (EDRT), ಬೆಂಗಳೂರು ಸಹಭಾಗಿತ್ವ ನೀಡಿವೆ.
ಜಾಥೆಯಲ್ಲಿ ಸಾರ್ವಜನಿಕರು, ವೈದ್ಯರು, ವೈದ್ಯಕೀಯ ಮತ್ತು ಅರೆವೈದ್ಯಕೀಯ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜಾಥೆಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಾಯಿಸುವವರಿಗೆ ಉಚಿತ ಟಿ-ಶರ್ಟ್ ನೀಡಲಾಗುವುದು. ನೋಂದಣಿಗಾಗಿ 9481451929 ಸಂಖ್ಯೆಗೆ ಕರೆ ಮಾಡಬಹುದು ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು.
ಮಧುಮೇಹದ ಆರಂಭಿಕ ಪತ್ತೆ ಹಾಗೂ ತಡೆಗಟ್ಟುವಿಕೆಯ ಮಹತ್ವ ಸಾರುವ ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.









