ಸುಳ್ಯ: ಕಾರನ್ನು ಹಿಮ್ಮುಖವಾಗಿ ಚಲಾಯಿಸುವ ವೇಳೆ ಹಿಂಬದಿಯಲ್ಲಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಹಿಳೆ ಮೃತಪಟ್ಟ ಘಟನೆ ನ.11ರಂದು ಸುಳ್ಯದಲ್ಲಿ ನಡೆದಿದೆ.
ಸುಳ್ಯ ಕಸಬ ನಿವಾಸಿ ಕಮರುನ್ನಿಸಾ (46) ಮೃತಪಟ್ಟ ಮಹಿಳೆ.
ಪೊಲೀಸ್ ಮಾಹಿತಿ ಪ್ರಕಾರ, ಕಮರುನ್ನಿಸಾ ಅವರು ಕೆಲಸ ಮಾಡುತ್ತಿದ್ದ ಸ್ಥಳದಿಂದ ಅವರ ಸಂಬಂಧಿಕ ಮಹರೂಫ್ ಎಂಬಾತ KA 04 MQ 1018 ನೋಂದಣಿ ಸಂಖ್ಯೆಯ ಕಾರಿನಲ್ಲಿ ಮನೆಗೆ ಕರೆತಂದಿದ್ದ. ಮನೆಯಲ್ಲಿ ಕಾರಿನಿಂದ ಇಳಿದ ಬಳಿಕ ಕಮರುನ್ನಿಸಾ ಅವರು ಕಾರಿನ ಹಿಂಭಾಗಕ್ಕೆ ಬಂದ ಸಂದರ್ಭದಲ್ಲಿ ಮಹರೂಫ್ ನಿರ್ಲಕ್ಷ್ಯದಿಂದ ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಈ ವೇಳೆ ಕಾರಿನ ಹಿಂಭಾಗಕ್ಕೆ ಸಿಲುಕಿದ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮೃತರ ಪುತ್ರ ಕಮಾಲುದ್ದೀನ್ (28) ನೀಡಿದ ದೂರಿನಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 157/2026, ಕಲಂ 106(1) ಬಿಎನ್‌ಎಸ್ 2023ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









