ಸೋನಿಪತ್ (ಹರ್ಯಾಣ): ಮೂವರು ಪುತ್ರಿಯರನ್ನು ಉತ್ತಮವಾಗಿ ಬೆಳೆಸಿ ಶಿಕ್ಷಣ ನೀಡಲು ಜೀವನವನ್ನೇ ಮುಡಿಪಾಗಿಟ್ಟಿದ್ದ ವೃದ್ಧ ತಂದೆಯೊಬ್ಬರು ಹರ್ಯಾಣದ ಸೋನಿಪತ್‌ನ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದು, ಪುತ್ರಿಯರು ಅಂತಿಮ ದರ್ಶನಕ್ಕೂ ಆಗಮಿಸದೇ ವಿಡಿಯೋ ಕಾಲ್ ಮೂಲಕವೇ ಅಂತ್ಯಸಂಸ್ಕಾರ ವೀಕ್ಷಿಸಿದ ಘಟನೆ ಮಾನವೀಯ ಮೌಲ್ಯಗಳ ಕುರಿತು ಚರ್ಚೆಗೆ ಕಾರಣವಾಗಿದೆ.ಮೂಲತಃ ಮುಂಬೈನ ಜವಳಿ ಉದ್ಯಮಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ ಕಳೆದ ಎರಡು ವರ್ಷಗಳಿಂದ ಸೋನಿಪತ್‌ನ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಮೀನಾ ಕೂಡ ಇದೇ ವೃದ್ಧಾಶ್ರಮದಲ್ಲೇ ಈ ಹಿಂದೆ ನಿಧನರಾಗಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗುಪ್ತಾ ಅವರು ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಮೃತಪಟ್ಟರು.ಮೃತರ ಪುತ್ರಿಯರಾದ ಅನಿತಾ ನೇಪಾಳದಲ್ಲಿ ಶಿಕ್ಷಕಿಯಾಗಿದ್ದು, ನಿಶಾ ಉತ್ತರ ಪ್ರದೇಶದ ಅಜಂಘಡ್‌ನಲ್ಲಿ ಹಾಗೂ ಕಿರಿಯ ಪುತ್ರಿ ಪ್ರಿಯಾ ಮುಂಬೈನಲ್ಲಿ ನೆಲೆಸಿದ್ದಾರೆ. ತಂದೆಯ ನಿಧನದ ಸುದ್ದಿ ತಿಳಿದಿದ್ದರೂ ತಮಗೆ ಬರಲು ಸಾಧ್ಯವಿಲ್ಲ ಎಂದು ಪುತ್ರಿಯರು ತಿಳಿಸಿದ್ದರಿಂದ, ವೃದ್ಧಾಶ್ರಮದ ಆಡಳಿತ ಮಂಡಳಿ ಹಾಗೂ ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಪುತ್ರಿಯರು ವಿಡಿಯೋ ಕಾಲ್ ಮೂಲಕವೇ ಅಂತ್ಯಕ್ರಿಯೆ ವೀಕ್ಷಿಸಿದರು.ನೇಪಾಳದಲ್ಲಿರುವ ಪುತ್ರಿ ಅನಿತಾ ಆನ್‌ಲೈನ್ ಮೂಲಕ ₹5,100 ಕಳುಹಿಸಿ ತಂದೆಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸುವಂತೆ ಮನವಿ ಮಾಡಿದ್ದರು.ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಮಾತನಾಡಿ, ಗುಪ್ತಾ ಅವರ ಆರೋಗ್ಯ ಹದಗೆಟ್ಟಿರುವ ಕುರಿತು ಸುಮಾರು 20 ದಿನಗಳ ಹಿಂದೆಯೇ ಪುತ್ರಿಯರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಅವರು ತಂದೆಯನ್ನು ಭೇಟಿ ಮಾಡಲು ಬಂದಿರಲಿಲ್ಲ. ಅಂತ್ಯಸಂಸ್ಕಾರದ ವೇಳೆ ವಿಡಿಯೋ ಕರೆ ಮೂಲಕ ಸಂಪರ್ಕದಲ್ಲಿದ್ದ ಪುತ್ರಿಯೊಬ್ಬರು, “ಇನ್ನೆಷ್ಟು ಸಮಯ ಬೇಕಾಗುತ್ತದೆ? ನಾವು ಊಟ ಮಾಡಿ ಸ್ನಾನ ಮಾಡಬೇಕು,” ಎಂದು ಹೇಳಿದ್ದು ಬೇಸರ ತಂದಿತು ಎಂದು ತಿಳಿಸಿದ್ದಾರೆ.ತಮ್ಮ ಪುತ್ರಿಯರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಗುಪ್ತಾ ಅವರು, ಅವರ ಸಾಧನೆಗಳ ಬಗ್ಗೆ ಸದಾ ಹೆಮ್ಮೆಪಡುತ್ತಿದ್ದರು. ಇಬ್ಬರು ಪುತ್ರಿಯರು ಶಿಕ್ಷಕಿಯರಾಗಿದ್ದಾರೆ. ಅಂತ್ಯಸಂಸ್ಕಾರದ ಬಳಿಕ ಅಸ್ಥಿ ವಿಸರ್ಜನೆಗೂ ಬರಲು ಸಾಧ್ಯವಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದು, ಗಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡುವಂತೆ ವೃದ್ಧಾಶ್ರಮದ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.ಕುಟುಂಬದ ಇಚ್ಛೆಯಂತೆ ಶಿವಚರಣ್ ರಾಮ್ ರತನ್ ಗುಪ್ತಾ ಅವರ ನೇತ್ರಗಳನ್ನು ಮರಣೋತ್ತರವಾಗಿ ದಾನ ಮಾಡಲಾಗಿದೆ.










