ಪುತ್ತೂರು:ಕೆಲ ದಿನಗಳ ಹಿಂದೆ ಮೃತಪಟ್ಟ ಕಾರ್ಮಿಕ ಶಿವಪ್ಪರವರ ಮೃತದೇಹವನ್ನು ಪಿಕಪ್‌ನಲ್ಲಿ ತಂದು ರಸ್ತೆ ಬದಿ ಮಲಗಿಸಿ ಅಮಾವೀಯ ಕೃತ್ಯ ಮಾಡಿದ ಪ್ರಕರಣಕ್ಕೆ ಸಂಬಂದಿಸಿ ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಆದಿ ದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ನ.೨೨ರಂದು ಬೆಳಿಗ್ಗೆ ೧೧ ಗಂಟೆಗೆ ನಗರ ಠಾಣೆಯ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಬು ಮರಿಕೆ ತಿಳಿಸಿದರು.
ನ.೨೧ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ್ಮರದ ಕೆರಮೂಲೆ ನಿವಾಸಿ ಮೇಸ್ತ್ರಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಶಿವಪ್ಪರವರು ಹೆನ್ರಿ ತಾವ್ರೋ ಮ್ಹಾಲಕತ್ವದ ಸಾಲ್ಮರದ ತಾವ್ರೋ ವುಡ್ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ನ.೧೬ರಂದು ಬೆಳಿಗ್ಗೆ ಕೆಲ ಹೊತ್ತಿನ ಕೆಲಸ ಇದೆ ಎಂದು ಹೇಳಿ ಅವರನ್ನು ಕರೆದುಕೊಂಡು ಹೋಗಿದ್ದರು. ಸುಮಾರು ೧೧ ಗಂಟೆಯ ವೇಳೆಗೆ ಮ್ಹಾಲಕ ಹೆನ್ರಿ ತಾವ್ರೋ, ಸ್ಟ್ಯಾನ್ಲಿ ಹಾಗೂ ಮತ್ತಿಬ್ಬರು ಅಪರಿಚಿತರು ಪಿಕಪ್‌ನಲ್ಲಿ ಶಿವಪ್ಪರವರ ಮೃತದೇಹವನ್ನು ತಂದು ಮನೆ ಮುಂಭಾಗದ ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿದ್ದಾರೆ. ಮನೆಯಲ್ಲಿದ್ದ ಶಿವಪ್ಪರವರ ಪತ್ನಿ ಹಾಗೂ ಮಗಳು ಬಂದು ಅವರು ವಿಚಾರಿಸಿದರೆ ಉಡಾಪೆಯಿಂದ ವರ್ತಿಸಿದ್ದಾರೆ. ನಂತರ ಆಟೋ ರಿಕ್ಷಾದ ಮೂಲಕ ಅವರನ್ನು ತಕ್ಷಣ ಶಿವಪ್ಪರವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತ ಪಡಿಸಿದ್ದರು.
ತನ್ನ ಮಾಲಕತ್ವದ ಸಂಸ್ಥೆಯಲ್ಲಿ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಅಸ್ವಸ್ಥರಾದಾಗ ಆಸ್ಪತ್ರೆಗೆ ದಾಖಲಿಸದೇ ಇರುವುದರಿಂದ ಅವರು ಮೃತಪಟ್ಟಿದ್ದಾರೆ. ಅಲ್ಲದೆ ಅವರು ಮೃತ ದೇಹವನ್ನು ಅಮಾನವೀಯವಾಗಿ ಪಿಕಪ್ ವಾಹನದ ಹಿಂಬಾಗದಲ್ಲಿ ಮರದ ದಿಮ್ಮಿಗಳ ಮೇಲೆ ಮಲಗಿಸಿಕೊಂಡು ತಂದು ಮನೆಯ ಮುಂಭಾಗದ ರಸ್ತೆ ಬದಿಯಲ್ಲಿ ಎಳೆದು ಹಾಕಿ ಹೋಗಿರುವ ಕ್ರೂರ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಘಟನೆಯ ಬಗ್ಗೆ ಸುದ್ದಿ ತಿಳಿಯುತ್ತಲೇ ಪೊಲೀಸ್ ಠಾಣೆ ಬಳಿ ಜಮಾಯಿಸಿ ಹೆನ್ರಿ ತಾವ್ರೋ ಮತ್ತಿತರರ ಮೇಲೆ ಪ್ರಕಟಣ ದಾಖಲಿಸಿ ತಕ್ಷಣ ಅವರನ್ನು ಬಂಧಿಸುವಂತೆ ನಿರಂತರವಾಗಿ ಒತ್ತಾಯಿಸಿದ್ದು ಸ್ಟ್ಯಾನ್ಲಿ ಎಂಬಾತನನ್ನು ನಗರಠಾಣಾ ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಕರೆದುತಂದ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಹೆರಿ ತಾವ್ರೋ ಅವರನ್ನು ಬಂಧಿಸದೇ ಇರುವುದರಿಂದ ಪೊಲೀಸ್ ಇಲಾಖೆ ಮೇಲೆ ಸಂಶಯ ಪಡುವಂತಾಗಿದೆ. ಅಲ್ಲದೆ ಘಟನೆಯನ್ನು ಸಮರ್ಥಿಸಿಕೊಂಡು ಹೆನ್ರಿ ತಾವ್ರೋ ಅವರ ಪುತ್ರ ಕಿರಣ್ ನೀಡಿದ ಹೇಳಿಕೆಗಳು ಮೃತರ ಕುಟುಂಬಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಈತನ ನೀಡಿದ ಹೇಳಿಕೆಯನ್ನು ಖಂಡಿಸಿ ಅವನನ್ನು ಬಂಧಿಸುವಂತೆ ನ.೧೯ರಂದು ಪೊಲೀಸರಿಗೆ ದೂರು ನೀಡಿದ್ದರೂ ಆತನನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದಿಲ್ಲ. ನಮ್ಮ ಸಮುದಾಯ ಆರ್ಥಿಕವಾಗಿ ಬಡವರಾಗಿರಬಹುದು. ಆದರೆ ನಮ್ಮಲ್ಲಿ ಹೋರಾಟದ ಕಿಚ್ಚು ಇದೆ. ಯುವಕರಲ್ಲಿ ಕುದಿಯುವ ರಕ್ತವಿದೆ. ಇಲಾಖೆ ಅದಕ್ಕೆ ಅವಕಾಶ ಕೊಡಬಾರದು. ನಮ್ಮ ತಾಳ್ಮೆಯನ್ನು ಪರೀಕ್ಷಿಸುವುದು ಬೇಡ. ಶಾಸಕರಿಗೂ ಮನವಿ ಮಾಡಿದ್ದು ಅವರು ಸ್ಪಂಧಿಸಿದ್ದು ಅವರು ಮೃತರ ಮನೆಗೆ ಭೇಟಿ ನೀಡಿದ್ದಾರೆ. ಸಮುದಾಯಕ್ಕೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸುವಂತೆ ಶಾಸಕರಲ್ಲಿಯೂ ಒತ್ತಡ ಹೇರಲಾಗುವುದು ಎಂದರು.
ಪ್ರಕರಣಕ್ಕೆ ಸಂವಬಂಧಿಸಿ ಸೂಕ್ತ ನ್ಯಾಯ ಒದಗಿಸುವಂತೆ ಪೊಲೀಸ್ ಉಪ ಅಧೀಕ್ಷಕರು ಹಾಗೂ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಯವರಿಗೆ ದೂರು ನೀಡಿದ್ದರೂ ಅವರು ಸೂಕ್ತವಾಗಿ ಸ್ಪಂಧಿಸಿರುವುದಿಲ್ಲ, ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ ಹಾಗೂ ವೈಪಲ್ಯಗಳನ್ನು ಖಂಡಿಸಿ ಆದಿ ದ್ರಾವಿಡ ಸಮಾಜ ಸಂಘವು ನ.೨೨ರಂದು ಪುತ್ತೂರು ನಗರ ಠಾಣಾ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು. ಮುಂದೆ ರಾಜ್ಯಮಟ್ಟದಲ್ಲಿ ತೀವ್ರವಾದ ಹೋರಾಟವನ್ನು ನಡೆಸಲಾಗುವುದು. ಮುಂದೆ ನಡೆಯುವ ಯಾವುದೇ ಘಟನೆಗಳಿಗೆ ಸರಕಾರ ಹಾಗೂ ಪೊಲೀಸ್ ಇಲಾಖೆ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಘಟನೆ ಬಗ್ಗೆ ಯಾವುದೇ ರಾಜಕೀಯ ನಾಯಕರು ಖಂಡಿಸಿಲ್ಲ:
ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಏಸು ಕ್ರಿಸ್ತರ ಸಮುದಾಯದವರಾಗಿರುವ ಹೆನ್ರಿ ತಾವ್ರೋ ಮಾಡಿದ ಹೇಯ ಕೃತ್ಯವನ್ನು ಯಾವುದೇ ಧರ್ಮಗುರುಗಳು, ರಾಜಕೀಯ ನಾಯಕರು ಖಂಡಿಸಿಲ್ಲ. ರಾಜಕೀಯ ನಾಯಕರು ನಮ್ಮನ್ನು ಅವರ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ ಹೊರತು ಯಾವುದೇ ಖಂಡನೆ ಮಾಡಿಲ್ಲ. ಸಮುದಾಯವನ್ನು ಇನ್ನೂ ಕೂಡ ಅವಮಾನ ರೀತಿಯಲ್ಲಿ ನೋಡಲಾಗುತ್ತಿದೆ. ನಮ್ಮ ಸಮುದಾಯವು ಮುಂದುವರಿದಿದೆ. ಆರ್ಥಿಕ ಶಕ್ತಿಯಿಲ್ಲದೇ ಇರಬಹುದು. ಹೋರಾಟದ ಕಿಚ್ಚು ನಮ್ಮಲ್ಲಿದೆ. ಮುಂದುವರಿದ ದ.ಕ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದ್ದು ಮನುಕುಲ ನಾಚಿಸುವಂತಾಗಿದೆ. ಘಟನೆಗೆ ಕಾರಣರಾದ ಹೆನ್ರಿ ತಾವ್ರೋ ಅವರ ಇಂಡಸ್ಟ್ರೀಯು ಯಾವುದೇ ಕಾರ್ಯಚರಣೆ ನಡೆಸದಂತೆ ನಿರ್ಬಂಧ ಇರಿಸಬೇಕು. ಅವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ವಕೀಲರಲ್ಲಿ ವಿನಂತಿ:
ಅಮಾನವೀಯವಾಗಿ ವರ್ತಿಸಿದ ಹೆನ್ರಿ ತಾವ್ರೋ ಅವರ ಪರವಾಗಿ ಪುತ್ತೂರಿನ ಯಾವುದೇ ವಕೀಲರು ಅವರ ಕೇಸನ್ನು ಪಡೆದುಕೊಳ್ಳಬಾರದು. ಬಡವರಾಗಿರುವ ಶಿವಪ್ಪರವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಹೆನ್ರಿಯವರು ಹಣ ಬಲದಿಂದ ಏನು ಬೇಕಾದರೂ ಮಾಡಬಹುದು. ಹೀಗಾಗಿ ವಕೀಲರು ಬಡವರ ಮೇಲೆ ಕರುಣೆ ತೋರಿ ಹೆನ್ರಿಯವರ ಪರ ವಾದಿಸಿಬಾರದು ಎಂದು ಬಾಬು ಮರಿಕೆ ಮನವಿ ಮಾಡಿದ್ದಾರೆ.
ಹೋಗುವಾಗ ಆರೋಗ್ಯವಾಗಿದ್ದರು:
ಹೆನ್ರಿ ತಾವ್ರೋ ಅವರೇ ಚಾಲಕರಾಗಿ ಪಿಕಪ್‌ನ್ನು ಚಲಾಯಿಸಿಕೊಂಡು ಬಂದ ಪಿಕಪ್‌ನಲ್ಲಿ ತಂದೆಯ ಮೃತ ದೇಹವನ್ನು ಕರೆ ತಂದು ಕೆಳಗಿಳಿಸುವಂತೆ ತಿಳಿಸಿದ್ದಾರೆ. ಏನಾಗಿದ ಎಂದು ವಿಚಾರಿಸಿದರೆ ಅವರು ಅದಕ್ಕೆಲ್ಲಾ ಸಮಯವಿಲ್ಲ ಈಗ ಕೆಳಗಿಳಿಸಿ ಎಂದು ತಿಳಿಸಿದ್ದಾರೆ. ಅವರ ಜೊತೆ ಸ್ಟ್ಯಾನ್ಲಿ ಹಾಗೂ ಮತ್ತಿಬ್ಬರು ಅಪರಿಚಿತರು ಜೊತೆಗಿದ್ದರು. ಹೋಗುವಾಗ ಆರೋಗ್ಯವಾಗಿಯೇ ಇದ್ದ ತಂದೆ ಮೃತದೇಹವಾಗಿ ಬಂದಿದ್ದಾರೆ. ಹತ್ತು ನಿಮಿಷದ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದಾರೆ ಎಂದು ಮೃತ ಶಿವಪ್ಪರವರ ಪುತ್ರಿ ಉಷಾ ತಿಳಿಸಿದ್ದಾರೆ.
ಇದೇ ಮೊದಲಲ್ಲ:
ಹೆನ್ರಿ ತಾವ್ರೋ ಈ ರೀತಿ ಅಮಾನವೀಯವಾಗಿ ವರ್ತಿಸುವುದು ಇದೇ ಮೊದಲಲ್ಲ. ಕದ್ದು ಮರ ಕಡಿದು ಸಾಗಿಸುತ್ತಿದ್ದ ಹೆನ್ರಿಯವರು ಕಳೆದ ೪ ವರ್ಷಗಳ ಹಿಂದೆ ಇದೇ ರೀತಿ ಮರ ಕಡಿಯುವ ಸಂದರ್ಭದಲ್ಲಿ ಮರ ಮೈಮೇಲೆ ಬಿದ್ದು ಪಕ್ಕೆಲುಬು ಮುರಿದ ಕಾರ್ಮಿಕ ಬಾಬು ಗುಂಪಕಲ್ಲು ಅವರನ್ನು ಮನೆ ಮುಂದೆ ಬಿಸಾಡಿ ಹೋಗಿದ್ದಾರೆ ಎಂದು ಸಂಘದ ಗೌರವ ಸಲಹೆಗಾರ ಅಣ್ಣಪ್ಪ ಕಾರೆಕ್ಕಾಡು ಆರೋಪಿಸಿದರು.
ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಲೋಹಿತ್ ಅಮ್ಚಿನಡ್ಕ, ಯುವ ವೇದಿಕೆ ಮುಖಂಡ ಮೋಹನ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.