ಪುತ್ತೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಮಂಜೂರಾದ ಜಮೀನನ್ನು ರದ್ದು ಪಡಿಸಿ ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದಕ್ಕೆ ಮಂಜೂರು ಮಾಡುವ ಹುನ್ನಾರ ನಡೆಯುತ್ತಿದೆ. ವಕ್ಪ್ ಆಸ್ತಿ, ಮೂಡಾದಂತೆ ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಮುಂದಾಗಿದ್ದಾರೆ ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಸಿದ್ದಾರೆ.


ನ.೨೧ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಠಾಚಾರ, ಹಗರಣಗಳು ಸ್ವಜನ ಪಕ್ಷಪಾತದಲ್ಲಿ ತುಂಬಿ ತುಳುಕಿದೆ. ದ.ಕ ಜಿಲ್ಲೆ ಇದಕ್ಕೆ ಹೊರತಾಗಿತ್ತು. ಆದರೆ ಈಗ ರಾಜ್ಯದಲ್ಲಿ ನಡೆಯುವ ವಿದ್ಯಾಮಾನಗಳು ಪುತ್ತೂರಿನಲ್ಲಿಯೂ ನಡೆಯುತ್ತಿದೆ. ಸರಕಾರಿ ಆಸ್ಪತ್ರೆಗೆ ಕಾದಿರಿಸಿದ ಜಾಗವನ್ನು ಖಾಸಗಿ ಟ್ರಸ್ಟ್ ಒಂದಕ್ಕೆ ನೀಡಲು ತಹಶೀಲ್ದಾರ್ ನಗರ ಸಭೆ, ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಯವರಗೆ ಪತ್ರವೊಂದು ದೊರೆತಿದ್ದು ಇನ್ನು ಪುತ್ತೂರಿನಲ್ಲಿ ಯವುದೇ ಇಲಾಖೆ ಜಾಗ ಉಳಿಯುವುದಿಲ್ಲ ಎಂಬ ಅನುಮಾನ ಕಾಡುತ್ತಿದೆ. ಪುತ್ತೂರಿನ ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಅಶೋಕ್ ಕುಮಾರ್ ರೈ ಕೆ.ಎಸ್‌ರವರು ಮುಖ್ಯ ಮಂತ್ರಿಯವರಿಗೆ ಮನವಿ ಮಾಡಿದ್ದು ಟ್ರಸ್ಟ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಗರ ಸಭಾ ವ್ಯಾಪ್ತಿಯ ಸ.ನಂ೧೩೧/೧೪ಎರಲ್ಲಿ ೦.೮೦ರಲ್ಲಿ ಸಾರ್ವಜನಿಕ ಆಸ್ಪತ್ರೆಯ ಉದ್ದೇಶಗಳಿಗೆ ಕಾಯ್ದಿರಿಸಿದ್ದ ಜಮೀನಿನ್ನು ರದ್ದುಪಡಿಸಿ ಅದರಲ್ಲಿ ೦.೩೦ಸೆಂಟ್ಸ್ ಜಾಗವನ್ನು ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್‌ನ ಕಟ್ಟಡ ನಿರ್ಮಾಣಕ್ಕೆ ಕಾಯ್ದಿರಿಸವಂತೆ ಇಲಾಖೆ ಶಿಪಾರಸ್ಸು ಮಾಡುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಟ್ರsಸ್ಟ್ ಪತ್ರಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸದ್ರಿ ಟ್ರಸ್ಟ್‌ಗೆ ಜಮೀನು ನೀಡುವ ಬಗ್ಗೆ ಕ್ರಮ ವಹಿಸಲು  ೧೬-೦೭-೨೦೨೪ರಂದು ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು ೪ ತಿಂಗಳ ಒಳಗಾಗಿ ಸದ್ರಿ ಜಮೀನಿನ ಮಂಜೂರಾತಿ ಮಾಡುವಂತೆ ಆದೇಶಿಸಿದ್ದಾರೆ. ಅಪರ ಮುಖ್ಯ ಕಾರ್ಯದರ್ಶಿಯವರು ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಗಳು ಸದರಿ ಆಸ್ಪತ್ರೆಯ ಜಾಗವನ್ನು ಉಲ್ಲೇಖಿಸಿಯೇ ೩೦ಸೆಂಟ್ಸ್ ಬದಲು ೧೦ ಸೆಂಟ್ಸ್ ಜಾಗವನ್ನು ಮಂಜೂರು ಮಾಡಲು ಭೂ ಮಾಪನಾ ಇಲಾಖೆ, ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರಿಗೆ ಆದೇಶಿಸಿದ್ದಾರೆ. ತಹಶೀಲ್ದಾರ್‌ರವರು ಪತ್ರಿಕಾ ಪ್ರಕಟಣೆಗಾಗಿ ನಗರ ಸಭೆ ಹಾಗೂ ಇಲಖಾ ಅಭಿಪ್ರಾಯಕ್ಕಾಗಿ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಪತ್ರ ಕಳಹಿಸಿದ್ದಾರೆ. ಜಮೀನು ಮಂಜೂರು ಮಾಡಲು ತುರ್ತಾಗಿ ಮುಂದಾಗಿದದ್ದು ನೋಡಿದರೆ ಇದರ ಹಿಂದೆ ಯಾವುದೋ ಪ್ರಭಲವಾದ ಶಕ್ತಿ ಇದ್ದಂತೆ ಕಾಣುತ್ತಿದೆ ಎಂದು ಆರೋಪಿಸಿದರು.
ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಯಾರದ್ದು? ಅದು ಯಾವಾಗ ಆರಂಭವಾಯಿತು. ಪುತ್ತೂರಿನಲ್ಲಿ ಅದರ ಕಚೇರಿ ಎಲ್ಲಿದೆ. ಅದರ ಸೇವೆಗಳು ಏನು. ಈ ಟ್ರಸ್ಟ್‌ನ ಪದಾಧಿಕಾರಿಗಳು ಯಾರು ? ಅದರ ಕಾರ್ಯವ್ಯಾಪ್ತಿ ಏನು ? ಅದು ಪುತ್ತೂರು ತಾಲೂಕಿನಲ್ಲಿ ನಡೆಸಿದ ಜನಪರ ಕಾರ್ಯಗಳು ಏನು ? ಸದರಿ ಟ್ರಸ್ಟ್ ಇದರ ಉದ್ದೇಶ ಏನು ? ಸದರಿ ಟ್ರಸ್ಟ್ ಇದಕ್ಕೆ ಸಾರ್ವಜನಿಕ ಆಸ್ಪತ್ರೆ ಇದಕ್ಕೆ ಮೀಸಲಾದ ಜಮೀನನ್ನು ನೀಡಬೇಕಾದ ಅಗತ್ಯತೆ ಏನು ? ಸರಕಾರಿ ಇಲಾಖೆಗಳಿಗೆ ಸ್ವಂತ ಸೂರು ಇಲ್ಲದ ಸಮಯದಲ್ಲಿ ಖಾಸಗಿ ಟ್ರಸ್ಟ್ ಗೆ ಸಾರ್ವಜನಿಕ ಆಸ್ಪತ್ರೆಯ ಜಮೀನನ್ನು ರದ್ದು ಪಡಿಸಿ ನೀಡುವ ಅಗತ್ಯತೆ ಏನಿದೆ.? ಈ ಮೊದಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಹಲವಾರು ಖಾಸಗಿ ಟ್ರಸ್ಟ್‌ಗಳು, ಇಲಾಖೆಗಳು, ಸಮುದಾಯದ ಅರ್ಜಿಗಳನ್ನು ಕಂದಾಯ ಇಲಾಖೆಯು ಇಷ್ಟು ತ್ವರಿತವಾಗಿ ಯಾಕೆ ವಿಲೇಮಾಡಲು ಬಯಸಲಿಲ್ಲ? ಈ ಹಿಂದೆಯೇ ಅರ್ಜಿ ನೀಡಿದ ಸಂಸ್ಥೆಗಳ, ಸಮುದಾಯಗಳ ಇಲಾಖೆಗಳ ಅರ್ಜಿಗಳನ್ನು ಬದಿಗಿರಿಸಿ ಈ ಖಾಸಗಿ ಟ್ರಸ್ಟ್ ಇದಕ್ಕೆ ಯಾಕೆ ಜಮೀನು ನೀಡಲು ಕಂದಾಯ ಇಲಾಖೆ ಮುಂದಾಗಿದೆ ಎಂದು ಅವರು ಪ್ರಶ್ನಿಸಿದರು.
ವ್ಯಾಲ್ಯುವೇಬಲ್ ಜಾಗ ಮಂಜೂರು ಮಡುವ ಭರವಸೆ ನೀಡಿದ್ದ ಶಾಸಕರು:
ಶಾಸಕ ಅಶೋಕ್ ಕುಮಾರ್ ರೈಯವರು ಕೆಲದಿನಗಳ ಹಿಂದೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪುತ್ತೂರಿನ ಹೃದಯ ಭಾಗದಲ್ಲಿ ವ್ಯಾಲ್ಯುವೇಬಲ್ ಜಾಗವನ್ನು ಮಂಜೂರು ಮಾಡಲಾಗುವುದಾಗಿ ತಿಳಿಸಿದ್ದರು. ಆ ವ್ಯಾಲ್ಯುವೇಬಲ್ ಜಾಗ ಇದೇ ಇರಬಹುದಾ? ಅಥವಾ ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸರಕಾರಿ ಆಸ್ಪತ್ರೆಯ ಜಾಗವನ್ನು ಕಬಳಿಸಿ, ಬಳಿಕ ಅದನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ನೀಡುವ ಹುನ್ನಾರ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ಮೌಲ್ಯ ಮಾಪಕರ ಪ್ರಕಾರ ಇಲ್ಲಿ ಸೆಂಟ್ಸ್ ರೂ.೩೦ಲಕ್ಷದಷ್ಟು ಬೆಲೆಯಿದೆ. ಇಂತಹ ಬೆಲೆಯ ಜಾಗವನ್ನು ಟ್ರಸ್ಟ್ ನೀಡುವ ಉದ್ದೇಶವೇನು ಎಂದು ಪ್ರಶ್ನಿಸಿದರು.
೩೦೦ ಬೆಡ್‌ನ ಆಸ್ಪತ್ರೆಗೆ ನೀಲ ನಕಾಸೆ ಸಿದ್ದವಾಗಿತ್ತು:
ಈ ಹಿಂದೆ ಶಕುಂತಳಾ ಟಿ ಶೆಟ್ಟಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿಗೆ ೪೦ ಎಕರೆ ಜಾಗವನ್ನು ಕಾದಿರಿಸಿದ್ದರು. ನನ್ನ ಅವಧಿಯಲ್ಲಿ ಅದನ್ನು ಮುಂದುರಿಸಿದಾಗ ಮೆಡಿಕಲ್ ಕಾಲೇಜು ಮಂಜೂರಾಗಬೇಕಾದರೆ ೩೦೦ಬೆಡ್ ಆಸ್ಪತ್ರೆಯ ಆವಶ್ಯಕತೆಯಿತ್ತು. ಅದಕ್ಕಾಗಿ ಆಸ್ಪತ್ರೆ ಸುತ್ತ ಮುತ್ತಲಿನ ಉಪನೋಂದಾವಣಾಧಿಕಾರಿ ಕಚೇರಿ, ಸಬ್ ಜೈಲು, ಕಂದಾಯ ಇಲಾಖೆಯ ಜಾಗ ಹಾಗೂ ಅಂಬೇಡ್ಕರ್ ಭವನಕ್ಕೆ ಕಾದಿರಿಸಿದ ೧೯ ಸೆಂಟ್ಸ್ ಜಾಗ ಸೇರಿದಂತೆ ಒಟ್ಟು ೬ ಎಕರೆ ಜಾಗವನ್ನು ಸರಕಾರಿ ಆಸ್ಪತ್ರೆಯ ಉದ್ದೇಶಗಳಿಗೆ ಪಹಣಿಯೂ ರಚಿಸಲಾಗಿದೆ. ೩೦೦ ಬೆಡ್‌ನ ಆಸ್ಪತ್ರೆಯ ನಿರ್ಮಾಣಕ್ಕೆ ನೀಲ ನಕಾಶೆ ಸಿದ್ದಪಡಿಸಿ ರೂ.೧೮೦ಕೋಟಿ ಅಂದಾಜು ಪಟ್ಟಿಯನ್ನು ತಯಾರಿಸಲಾಗಿತ್ತು ಎಂದು ತಿಳಿಸಿದರು.


ವಿಧಾನ ಸೌಧವನ್ನೂ ಟ್ರಸ್ಟ್‌ಗೆ ಹಸ್ತಾಂತರಿಸಬಹುದು:
ಎಲ್ಲೆಲ್ಲಿಯೂ ಜಾಗವನ್ನು ನುಂಗುವುದನ್ನು ಕೇಳಿದ್ದೇವೆ. ಒಬ್ಬ ಮುಖ್ಯಮಂತ್ರಿಯೇ ನೇರವಾಗಿ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಶಾಸಕರಿಗೆ ಆರೋಗ್ಯ ಇಲಾಖೆಯ ಜಾಗ ರದ್ದು ಮಾಡಿ ಟ್ರಸ್ಟ್ ನೀಡುವ ಉದ್ದೇಶ ಏನು? ಬಡವರ ಆಸ್ಪತ್ರೆಯ ಜಾಗವನ್ನು ಈ ರೀತಿಯಾಗಿ ನುಂಗುವುದಾದರೆ ಮುಂದಿನ ದಿನಗಳಲ್ಲಿ ವಿಧಾನ ಸೌಧದ ಜಾಗವನ್ನೂ ಯಾವುದೋ ಟ್ರಸ್ಟ್‌ಗೆ ಈ ಸರಕಾರ ಹಾಗೂ ಮುಖ್ಯ ಮಂತ್ರಿಗಳು ಹಸ್ತಾಂತರಿಸಲು ಹಿಂದೆ ಮುಂದೆ ನೋಡಲಿಕ್ಕಿಲ್ಲ. ಜನಪ್ರತಿನಿಧಿಗಳಿಗೆ ಸಾರ್ವಜನಿಕ ಹಿತಾಶಕ್ತಿಯಿರಬೇಕು. ಸಾರ್ವಜನಿಕ ಆಸ್ತಿಗಳನ್ನು ರಕ್ಷಣೆ ಮಾಡಬೇಕಾದ ಅವರೇ ನುಂಗುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಜಿಲ್ಲೆಯ ೬ ಶಾಸಕರು ವಿಧಾನ ಸಭೆಯಲ್ಲಿ ಹಾಗೂ ೨ ಪರಿಷತ್ ಸದಸ್ಯರು ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಲಿದ್ದಾರೆ. ಪಕ್ಷದ ಮುಖಾಂತರ ಕಾನೂನಾತ್ಮಕ ಹೋರಾಟ ನಡೆಯಲಿದೆ. ಸಂಸದರು, ಶಾಸಕರು, ಪರಿಷತ್ ಸದಸ್ಯರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಪ್ರೇರಣೆ ನೀಡುವ, ಕಾನೂನು ಬಾಹಿರವಾಗಿ ನಡೆಯುವ ಭ್ರಷ್ಠ ಅಧಿಕಾರಿಗಳ ವಿರುದ್ಧವೂ ಹೋರಾಟ ನಡೆಯಲಿದೆ. ಸರಕಾರಿ ಆಸ್ಪತ್ರೆಯ ಒಂದಿಚ್ಚು ಜಾಗವನ್ನು ಯಾರಿಗೂ ನೀಡಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.


ಹೀಗಾದರೆ ಮೆಡಿಕಲ್ ಕಾಲೇಜಿನ ಭರವಸೆ ಇದೆಯಾ?
ಸರಕಾರಿ ಆಸ್ತಿಯನ್ನು ನುಂಗಿ ನೀರು ಕುಡಿಯುವ ಯೋಚನೆ ಮಾಡುತ್ತಿದ್ದಾರೆ. ವಕ್ಪ್, ಮೂಡಾ ಆಯ್ತು. ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಬಂದಿದ್ದಾರೆ. ಈ ಸರಕಾರದಲ್ಲಿ ಭೂ ಕಳ್ಳತನ ರಾಜಾರೋಷವಾಗಿ ನಡೆಯುತ್ತಿದೆ. ೩೦೦ ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿರುವ ಜಾಗವನ್ನು ನುಂಗಲು ಮುಂದಾಗಿದ್ದಾರೆ. ಇವರಿಗೆ ಸಾರ್ವಜನಿಕರ ಹಿತಾಶಕ್ತಿಯಿಲ್ಲ. ವೈಯಕ್ತಿಕ ಹಿತಾಶಕ್ತಿ ಮಾತ್ರ. ಸರಕಾರಿ ಆಸ್ಪತ್ರೆಯ ಜಮೀನನ್ನೇ ಮಾರಾಟ ಮಾಡುವ ಉದ್ದೇಶ ಹೊಂದಿರುವವರಿಂದ ಇವರಿಂದ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ಕಾಣುವ ಭರವಸೆ ಇದೆಯಾ ಎಂದು ಪ್ರಶ್ನಿಸಿದರು.
ಎಲ್ಲಾ ಜಗ ಸೇರಿಸಿ ೮೦ ಸೆಂಟ್ಸ್‌ನಲ್ಲಿ ೧೯ ಸೆಂಟ್ಸ್‌ನಲ್ಲಿ ೧೯ ಸೆಂಟ್ಸ್ ಜಾಗ ಅಂಬೇಡ್ಕರ್ ಭವನಕ್ಕೆ ಮಂಜೂರಾಗಿತ್ತು. ಸರಕಾರಿ ಅಸ್ಪತ್ರೆಯ ಅಭಿವೃದ್ಧೀಗಾಗಿ ದಲಿತ ಸಂಘಟನೆಯವರೊಂದಿಗೆ ಅಂದಿನ ಸಹಾಯಕ ಆಯುಕ್ತರಾಗಿದ್ದ ಯತೀಶ್ ಉಲ್ಲಾಳ್ ನೇತೃತ್ವದಲ್ಲಿ ಸಭೆ ನಡೆಸಿ ಅವರನ್ನು ಮನವೊಳಿಸಿ ಸರಕಾರಿ ಆಸ್ಪತ್ರೆಯ ಉದ್ದೇಶಗಳಿಗೆ ನೀಡಲಾಗಿತ್ತು. ಇಲ್ಲಿನ ೧೯ ಸೆಂಟ್ಸ್ ಬದಲು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬನ್ನೂರು ಸಮೀಪ ೬೦ ಸೆಂಟ್ಸ್ ಜಾಗವನ್ನು ಕಾದಿರಿಸಲಾಗಿದೆ.
ಇಂಡಿಯನ್ ಮೆಡಿಕಲ್ ಕೌನ್ಸಿಲ್‌ನ ಮಾರ್ಗದರ್ಶನದಂತೆ ಸರಕಾರಿ ಮೆಡಿಕಲ್ ಕಾಲೇಜಿಗೆ ೩೦೦ಬೆಡ್ ಆಸ್ಪತ್ರೆಯ ಆವಶ್ಯಕತೆಯಿದೆ. ಅದಕ್ಕಾಗಿ ನನ್ನ ಅವಧಿಯಲ್ಲಿ ೩೦೦ ಬೆಡ್‌ನ ಆಸ್ಪತ್ರೆ ಮಾಡಲು ಮುಂದಾಗಿದ್ದೆ. ಸರಕಾರಿ ಆಸ್ಪತ್ರೆಯನ್ನು ಎಲ್ಲಿಯೂ ಮೂಲೆಯಲ್ಲಿ ಕಟ್ಟಿದರೆ ಹೇಗೆ. ಅಲ್ಲಿಗೆ ರೋಗಿಗಳು ಹೋಗಲು ಸಾಧ್ಯವಿದೆಯಾ. ಮೆಡಿಕಲ್ ಕಾಲೇಜು ಎಲ್ಲಿ ಬೇಕಾದರೂ ಕಟ್ಟಬಹುದು. ಕಲಿಯುವ ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ಹೋಗಬಹುದು. ವಿಟ್ಲದಲ್ಲಿಯೂ ಆಸ್ಪತ್ರೆಯ ಜಾಗವನ್ನು ಪಕ್ಷದ ಕಚೇರಿಗೆ ನೀಡಲು ಮುಂದಾಗಿದ್ದರು. ಆದರೆ ಅಲ್ಲಿ ಪಟ್ಟಣ ಪಂಚಾಯತ್‌ನವರು ವಿರೋಧದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಇವರು ಹುಡುಕುವುದೇ ಸರಕಾರಿ ಆಸ್ಪತ್ರೆಯ ಜಾಗ. ಮಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಯೂ ಪ್ರಿಯದರ್ಶಿನಿ ಟ್ರಸ್ಟ್‌ನ ಹೆಸರಿನಲ್ಲಿರುವ ಮಾಹಿತಿಯಿದೆ. ಪುತ್ತೂರಿನಲ್ಲಿ ಭೂ ಕಬಳಿಕೆಯ ಪ್ರಥಮ ಪ್ರಕರಣವಾಗಿದೆ. ಇದರ ವಿರುದ್ಧ ಬಿಜೆಪಿಯಿಂದ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಆಸ್ಪತ್ರೆಯ ಜಾಗವನ್ನು ಟ್ರಸ್ಟ್‌ಗೆ ನೀಡುವುದನ್ನು ಅಧಿಕಾರಿಗಳು ತಿರಸ್ಕಾರ ಮಾಡದಿದ್ದರೆ ಬಜೆಪಿ ಹೋರಾಟ ಮಾಡಲಿದೆ. ಯಾವುದೇ ಇಲಾಖೆಗಳಿಗೆ ಕಾದಿರಿಸಿದ ಜಾಗವನ್ನು ಖಾಸಗಿಗೆ ನೀಡುವುದನ್ನು ಬಿಜೆಪಿ ವಿರೋಧಿಸುತ್ತಿದೆ ಎಂದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲದ ಅಧ್ಯಕ್ಷ ಪಿ.ಬಿ. ಶಿವಕುಮಾರ್ ಕಲ್ಲಿಮಾರ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!