ಬೆಂಗಳೂರು: ಸರ್ಕಾರಿ ಸಭೆ ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಕ್ರಮದಲ್ಲಿ ಏಕೀಕೃತ ಶಿಷ್ಟಾಚಾರ ಪಾಲನೆಗಾಗಿ ರಾಜ್ಯ ಸರ್ಕಾರ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ. ಇನ್ನುಮುಂದೆ ಸರ್ಕಾರದ ಕಾರ್ಯಕ್ರಮಗಳಿಗೆ ಆಹ್ವಾನ ನೀಡುವಲ್ಲಿ ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಎಲ್ಲ ಇಲಾಖೆಗಳು ಹಾಗೂ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.
ಈ ಕುರಿತು ಸರ್ಕಾರ ತಿಳಿಸಿರುವಂತೆ, ಸಭೆ–ಸಮಾರಂಭಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಬಗ್ಗೆ ಸಮಗ್ರ ಮಾರ್ಗಸೂಚಿಗಳನ್ನು ಈಗಾಗಲೇ 16.04.2019ರ ಸುತ್ತೋಲೆ (ಸಂಖ್ಯೆ: ಸಿಆಸುಇ 34 ಹೆಚ್ ಪಿಎ 2018) ಮೂಲಕ ಹೊರಡಿಸಲಾಗಿತ್ತು. ಆದರೆ ಆಹ್ವಾನಿತರ ಹಾಜರಾತಿ ಖಚಿತಪಡಿಸಿಕೊಳ್ಳದೇ ಆಹ್ವಾನ ಪತ್ರಿಕೆಗಳನ್ನು ಮುದ್ರಿಸುವುದು, ಅತಿಥಿಗಳ ಸಂಖ್ಯೆಯ ಅತಿರೇಕ ಹಾಗೂ ಆಸನ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ.
ಈ ಹಿನ್ನೆಲೆ 15.10.2025ರಂದು ಸಿಆಸುಇ 39 ಹೆಚ್‌ಪಿಎ 2025ರ ಸುತ್ತೋಲೆಯನ್ನು ಹೊರಡಿಸಿ, ಹಿಂದಿನ ಸೂಚನೆಗಳನ್ನು ಭಾಗಶಃ ತಿದ್ದುಪಡಿ ಮಾಡಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಸರ್ಕಾರಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ, ಸುಗಮವಾಗಿ ಹಾಗೂ ಘನತೆಯಿಂದ ನಡೆಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ಕಾರ್ಯಕ್ರಮಗಳನ್ನು ರಾಜ್ಯ ಮಟ್ಟ, ಜಿಲ್ಲಾ ಮಟ್ಟ (ಇಲಾಖೆ ಆಯೋಜನೆ), ಜಿಲ್ಲಾ ಮಟ್ಟ (ಜಿಲ್ಲಾಡಳಿತ ಆಯೋಜನೆ), ತಾಲ್ಲೂಕು ಮಟ್ಟ ಹಾಗೂ ಕೇಂದ್ರ ಪುರಸ್ಕೃತ/ಪ್ರಾಯೋಜಿತ ಕಾರ್ಯಕ್ರಮಗಳು ಎಂದು ವರ್ಗೀಕರಿಸಲಾಗಿದೆ.
ರಾಜ್ಯ ಮಟ್ಟದ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಂಬಂಧಿತ ಇಲಾಖಾ ಸಚಿವರು ಅಥವಾ ಸಚಿವರು ಸೂಚಿಸುವ ಗಣ್ಯರು ನೆರವೇರಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಕ್ಷೇತ್ರದ ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳು ಮತ್ತು ಗೌರವಾನ್ವಿತ ಅತಿಥಿಗಳ ಆಯ್ಕೆಯಲ್ಲಿ ಸಹ ಮಿತಿ ವಿಧಿಸಲಾಗಿದ್ದು, ಆಹ್ವಾನ ಪತ್ರಿಕೆ ಹಾಗೂ ವೇದಿಕೆಯಲ್ಲಿ ಆಸೀನರಾಗುವ ಗಣ್ಯರ ಸಂಖ್ಯೆ ಸಾಮಾನ್ಯವಾಗಿ ಒಂಬತ್ತನ್ನು ಮೀರಬಾರದು. ಅನಿವಾರ್ಯ ಸಂದರ್ಭಗಳಲ್ಲಿ ಗರಿಷ್ಠ 13 ಮಂದಿವರೆಗೆ ಅವಕಾಶ ನೀಡಲಾಗಿದೆ.
ಎಲ್ಲ ಸರ್ಕಾರಿ ಇಲಾಖೆಗಳು, ಅಂಗಸಂಸ್ಥೆಗಳು ಮತ್ತು ಜಿಲ್ಲಾಡಳಿತಗಳು ಈ ಪರಿಷ್ಕೃತ ಶಿಷ್ಟಾಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಖಡಕ್ ಸೂಚನೆ ನೀಡಿದೆ














