ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೂಲನಾಗ ಸನ್ನಿಧಿಯಲ್ಲಿ ನಾಗರಪಂಚಮಿ7 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಪ್ರಸಾದಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೂಲನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಉತ್ಸವವು ಭಕ್ತಿ, ಶ್ರದ್ಧೆಯಿಂದ ನಡೆಯಿತು.ಬೆಳಗ್ಗಿನಿಂದಲೇ ನಾಗಸನ್ನಿಧಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಗದೇವರಿಗೆ ಹಾಲು, ಸೀಯಾಳ ಸಮರ್ಪಿಸಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವಿ.ಎಸ್. ಭಟ್ ಅವರು ನಾಗದೇವರಿಗೆ ಹಾಲು ಹಾಗೂ ಸೀಯಾಳ ಅಭಿಷೇಕ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ತುಪ್ಪದ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಮಧ್ಯಾಹ್ನ ನಾಗತಂಬಿಲ ಹಾಗೂ ಸಂಜೆ ಆಶ್ಲೇಷ ಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉತ್ಸವದಲ್ಲಿ 7 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.ಅಭಿವೃದ್ಧಿ ಕಾಮಗಾರಿಗಳುದೈವಜ್ಞರ ಸಲಹೆ ಮತ್ತು ತಂತ್ರಿಗಳ ಮಾರ್ಗದರ್ಶನದಂತೆ ದೇವಸ್ಥಾನದ ಅಭಿವೃದ್ಧಿಗೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ದೇವಸ್ಥಾನದ ಬಳಿಯಿದ್ದ ನಾಗಸನ್ನಿಧಿಯನ್ನು ಮೂಲನಾಗ ಸನ್ನಿಧಿಯಲ್ಲಿ ಸೇರಿಸಲಾಗಿದೆ.ದೇವರಿಗೆ ಶುದ್ಧ ಎಳ್ಳೆಣ್ಣೆ ಸಮರ್ಪಣೆ, ಆರ್ಧಾ ನಕ್ಷತ್ರದಂದು ಎಳ್ಳೆಣ್ಣೆ ಅಭಿಷೇಕ, ಭಕ್ತರಿಗೆ ತುಪ್ಪದ ದೀಪ ಬೆಳಗಲು ಅವಕಾಶ, ಶುದ್ಧ ಕುಂಕುಮ ಸಮರ್ಪಣೆ ಹಾಗೂ ಒಳಾಂಗಣದಲ್ಲಿ ನವಗ್ರಹ ದೇವರ ಪ್ರತಿಷ್ಠೆ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಯ್ಯಪ್ಪ ದೇವರಿಗೆ ಬಾಲಾಲಯ ನಿರ್ಮಾಣ, ರಕೇಶ್ವರಿಗೆ ಒಳಾಂಗಣದಲ್ಲಿ ಗುಡಿ ನಿರ್ಮಾಣಕ್ಕೆ ಸಿದ್ಧತೆ, ರಾಜಾಂಗಣದಲ್ಲಿ ಐದು ಶಿಲಾಮಯ ಕಟ್ಟೆಗಳ ನಿರ್ಮಾಣ ಹಾಗೂ ಕೆರೆಯ ಬಳಿ ಅಶ್ವತ್ಥಕಟ್ಟೆ ನಿರ್ಮಾಣವೂ ನಡೆದಿದೆ. ಒತ್ತುವರಿಯಾಗಿದ್ದ ಜಾಗವನ್ನು ದೇವಸ್ಥಾನದ ವಶಕ್ಕೆ ಪಡೆಯುವ ಕಾರ್ಯವೂ ನಡೆದಿದೆ ಎಂದು ವ್ಯವಸ್ಥಾಪನಾ ಸಮಿತಿ ತಿಳಿಸಿದೆ.ಅಚ್ಚುಕಟ್ಟಾದ ವ್ಯವಸ್ಥೆಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಮಳೆಯ ಹಿನ್ನೆಲೆಯಲ್ಲಿ ಶೀಟ್ ಚಪ್ಪರದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ತಂದ ಸೀಯಾಳಗಳನ್ನು ಸ್ವೀಕರಿಸಿ ಅರ್ಚಕರಿಗೆ ತಲುಪಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ತೀರ್ಥಪ್ರಸಾದ ವಿತರಣೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.ಭಕ್ತರ ಸರದಿ, ಪೂಜೆ, ತೀರ್ಥಪ್ರಸಾದ ಮತ್ತು ಅನ್ನಪ್ರಸಾದ ವಿತರಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಯಾವುದೇ ಗೊಂದಲ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿತ್ತು.ಪ್ರತಿ ತಿಂಗಳ ಪಂಚಮಿ ಸೇವೆ, ತಂಬಿಲ ಸೇವೆ ಹಾಗೂ ನಾಗರಪಂಚಮಿ ದಿನದ ವಿಶೇಷ ಸೇವೆಗಳನ್ನು ದೇವಸ್ಥಾನದ ಸಂಪ್ರದಾಯದಂತೆ ಮುಂದುವರಿಸಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ನಳಿನಿ ಪಿ. ಶೆಟ್ಟಿ, ಕೃಷ್ಣವೇಣಿ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ದಿನೇಶ್ ಪಿ.ವಿ., ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ನಾಗೇಶ್ ರಾವ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!