ಮಂಗಳೂರು: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆಯದಿದ್ದರೂ, ಮತ್ತೊಬ್ಬ ಅಭ್ಯರ್ಥಿಯ ಹಾಲ್‌ಟಿಕೆಟ್ ಪಡೆದು ಅದನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಬದಲಾಯಿಸಿ, ತಾನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವಂತೆ ಬಿಂಬಿಸಿದ ಆರೋಪದ ಮೇಲೆ ಕಡಬ ತಾಲೂಕಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.ಕಡಬ ತಾಲೂಕಿನ ಕೋಡಿಂಬಾಳದ ಬೆದ್ರಾಜೆ ನಿವಾಸಿ ಯಜೇಶ್ ಬಿ.ಜೆ. ರೈ (22) ಬಂಧಿತ ಆರೋಪಿ.ಸೆ.28ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ನೇಮಕಾತಿ-2026ರ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ ನಡೆಯುತ್ತಿದ್ದ ವೇಳೆ ಯಜೇಶ್ ಹಾಲ್‌ಟಿಕೆಟ್ ಹಾಜರುಪಡಿಸಿದ್ದರು. ಪರಿಶೀಲನೆ ನಡೆಸಿದಾಗ ಅವರ ಹೆಸರು ನೇಮಕಾತಿಯ 1:5 ಪಟ್ಟಿಯಲ್ಲಿ ಇರಲಿಲ್ಲ. ಹೀಗಾಗಿ ದಾಖಲೆ ನಕಲಿ ಎಂಬುದು ಪೊಲೀಸರ ಗಮನಕ್ಕೆ ಬಂದಿದೆ.ತನಿಖೆ ವೇಳೆ ಆರೋಪಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಬಳಿಕ ಮತ್ತೊಬ್ಬ ಅಭ್ಯರ್ಥಿಯ ಹಾಲ್‌ಟಿಕೆಟ್ ಪಡೆದು, ಅದರಲ್ಲಿ ಅಗತ್ಯ ವಿವರಗಳನ್ನು AI ತಂತ್ರಜ್ಞಾನದ ಮೂಲಕ ಬದಲಾಯಿಸಿ ನಕಲಿ ಹಾಲ್‌ಟಿಕೆಟ್ ಸಿದ್ಧಪಡಿಸಿರುವ ಶಂಕೆ ವ್ಯಕ್ತವಾಗಿದೆ.ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಸಾಕ್ಷ್ಯಗಳು ಆರೋಪಿಯ ಮೊಬೈಲ್‌ನಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ನಕಲಿ ದಾಖಲೆ ಸೃಷ್ಟಿ, ಅದರ ಬಳಕೆ ಹಾಗೂ ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.











