ಧರ್ಮಸ್ಥಳ : ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದ್ದು, ಜೀವನದ ಸಾರ್ಥಕತೆಗೆ ಕಾರಣವಾಗುವ ಸಂಸ್ಕಾರವನ್ನು ಭಜನೆಯ ಮೂಲಕ ಬೆಳೆಸಿಕೊಳ್ಳಬಹುದು ಎಂದು ಉಜಿರೆಯ ಅಶೋಕ ಭಟ್ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 28ನೇ ವರ್ಷದ ಭಜನಾ ಕಮ್ಮಟದ ಮೂರನೇ ದಿನವಾದ ಸೆ.30ರಂದು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದಿನ ಯುವಜನತೆ ವ್ಯವಹಾರಿಕ ಜೀವನ ಹಾಗೂ ಸಂಪಾದನೆಯ ನಡುವೆ ಸಂಸ್ಕಾರವನ್ನು ಮರೆಯುತ್ತಿರುವುದು ಕಂಡುಬರುತ್ತಿದೆ. ಭಗವಂತನ ಸ್ಮರಣೆ ಮತ್ತು ಭಜನೆಯ ಮೂಲಕ ಸಂಸ್ಕಾರವನ್ನು ಪುನಶ್ಚೇತನಗೊಳಿಸಬಹುದು. ಸಮಾಜದಲ್ಲಿ ಹೆಚ್ಚುತ್ತಿರುವ ವ್ಯಸನಗಳಿಗೆ ಸಂಸ್ಕಾರದ ಕೊರತೆಯೂ ಒಂದು ಕಾರಣವಾಗಿದ್ದು, ಮಕ್ಕಳ ಮೇಲಿನ ಅತಿಯಾದ ಮೋಹ-ವಾತ್ಸಲ್ಯವೂ ಕೆಲವೊಮ್ಮೆ ಸಂಸ್ಕಾರ ಮರೆಯಾಗಲು ಕಾರಣವಾಗುತ್ತಿದೆ ಎಂದು ಹೇಳಿದರು.ಭಾರತದ ಅಸ್ಮಿತೆಯನ್ನು ಉಳಿಸುವ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಸಂಸ್ಕಾರ ಅತ್ಯಂತ ಮುಖ್ಯ. ಈ ಸಂಸ್ಕಾರವನ್ನು ಬೆಳೆಸುವಲ್ಲಿ ಭಜನೆಗೆ ಮಹತ್ವದ ಪಾತ್ರವಿದ್ದು, ಇದಕ್ಕೆ ದಾಸ ಪರಂಪರೆಯ ಕೊಡುಗೆ ಅಪಾರವಾಗಿದೆ ಎಂದರು.ಆತ್ಮವು ಆಧ್ಯಾತ್ಮಿಕ ದಾರಿಯಲ್ಲಿ ಪರಮಾತ್ಮನ ಕಡೆ ಸಾಗಲು ಭಜನೆ ಸನ್ಮಾರ್ಗವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಖಾವಂದರು 28 ವರ್ಷಗಳಿಂದ ಭಜನಾ ಕಮ್ಮಟದ ಮೂಲಕ ಸಮಾಜದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಬದಲಾವಣೆಗೆ ಕಾರಣರಾಗಿದ್ದು, ಯುವ ಪೀಳಿಗೆಯನ್ನು ಆಧ್ಯಾತ್ಮಿಕತೆಯತ್ತ ಪ್ರೇರೇಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಭಜನಾ ಕೀರ್ತನೆಗಳ ತರಬೇತಿಭಜನಾ ಕಮ್ಮಟದ ಮೂರನೇ ದಿನ ಶಿಬಿರಾರ್ಥಿಗಳಿಗೆ ಕಾಸರಗೋಡಿನ ರಾಜ್ಯಮಟ್ಟದ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ ಅವರು ಭಜನಾ ತರಬೇತಿ ನೀಡಿದರು. ‘ಹರಿದಾಸ ಸಾಹಿತ್ಯದ ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ’ ಸೇರಿದಂತೆ ವಿವಿಧ ಭಜನಾ ಕೀರ್ತನೆಗಳನ್ನು ಶಿಬಿರಾರ್ಥಿಗಳಿಗೆ ಅಭ್ಯಾಸ ಮಾಡಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ, ಶ್ರೀಧಾಮ, ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಭಜನಾ ಕಮ್ಮಟ ಪರಿಷತ್‌ನ ಉಪಾಧ್ಯಕ್ಷೆ ಡಾ. ಹೇಮಾವತಿ ಅಮ್ಮನವರು, ಐಶ್ವರ್ಯ ನಿಶ್ಚಲ್ ಜೈನ್, ಭಜನಾ ಕಮ್ಮಟ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ವೀರು ಶೆಟ್ಟಿ, ಸಮಿತಿಯ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.











