ಪುತ್ತೂರು: ಗಾಂಧಿ ಜಯಂತಿ ಅಂಗವಾಗಿ ಪುತ್ತೂರು ರೋಟರಿ ಕ್ಲಬ್ ವತಿಯಿಂದ ನಗರದ ಎಂಟೂ ರೋಟರಿ ಕ್ಲಬ್‌ಗಳ ಸಹಯೋಗದಲ್ಲಿ ಅ.2ರಂದು ಸ್ವಚ್ಛತಾ ಜಾಗೃತಿ ಜಾಥಾ ಹಾಗೂ ನಗರಸಭೆಯ ಸ್ವಚ್ಛತಾ ಸೇನಾನಿಗಳ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಬೆಳಗ್ಗೆ 9ಕ್ಕೆ ದರ್ಬೆ ಹಾಗೂ ಬೊಳುವಾರಿನಿಂದ ಏಕಕಾಲದಲ್ಲಿ ‘ನಮ್ಮ ಕಸ ನಮ್ಮ ಜವಾಬ್ದಾರಿ’ ಘೋಷವಾಕ್ಯದೊಂದಿಗೆ ಜಾಥಾ ಆರಂಭವಾಗಲಿದ್ದು, ಪುತ್ತೂರು ಬಸ್ ನಿಲ್ದಾಣದಲ್ಲಿ ಸಮಾಪನಗೊಳ್ಳಲಿದೆ. ಜಾಥಾದಲ್ಲಿ ಎಂಟೂ ರೋಟರಿ ಕ್ಲಬ್‌ಗಳ ಸದಸ್ಯರು, ಸಂತ ಫಿಲೋಮಿನಾ ಕಾಲೇಜು, ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಹಾಗೂ ನಗರಸಭೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಾಗೃತಿ ಜಾಥಾ ಉಸ್ತುವಾರಿ ಜಗಜೀವನ್ ದಾಸ್ ತಿಳಿಸಿದ್ದಾರೆ.ಸಂಜೆ 3ಕ್ಕೆ ನಗರಸಭೆ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಮಾರು 65 ಮಂದಿ ಸ್ವಚ್ಛತಾ ಸೇನಾನಿಗಳಿಗೆ ತಲಾ ₹2 ಸಾವಿರ ಮೌಲ್ಯದ ಸೊತ್ತುಗಳನ್ನು ನೀಡಿ ಗೌರವಿಸಲಾಗುವುದು.ಗಾಂಧೀಜಿಯವರು ಮಾನಸಿಕ ಹಾಗೂ ಸಾಮಾಜಿಕ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಅವರ ಆಶಯದಂತೆ ನಗರವನ್ನು ಸ್ವಚ್ಛವಾಗಿಡಲು ನಿರಂತರವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರನ್ನು ಗಾಂಧಿ ಜಯಂತಿಯಂದು ಗೌರವಿಸಲಾಗುತ್ತಿದೆ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ. ಎಂ. ದತ್ತಾತ್ರೇಯ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಇಬ್ರಾಹಿಂ ಎಂ., ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಹಾಗೂ ಕಸಾಪ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಗಣೇಶ್ ಟ್ರೇಡರ್ಸ್, ಶ್ರೀಲಕ್ಷ್ಮೀ ಏಜೆನ್ಸಿಸ್, ಏಷ್ಯನ್ ವುಡ್ ಆ್ಯಂಡ್ ಮಂಗಳೂರು ಫರ್ನಿಚರ್ಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಹಾಗೂ ನಯಾ ಚಪ್ಪಲ್ ಬಜಾರ್ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿವೆ. ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ ಗೌಡ, ರಫೀಕ್ ಎಂ.ಜಿ., ಮನೋಜ್ ಹಾಗೂ ಇಸ್ಮಾಯಿಲ್ ಉಪಸ್ಥಿತರಿದ್ದರು.











