ಬೆಂಗಳೂರು: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಭಾಷಾ ಹಬ್ಬ ಆಯೋಜಿಸಲಾಗುತ್ತಿದೆ ಎಂಬ ವರದಿಗಳನ್ನು ಮುಖ್ಯಮಂತ್ರಿ ಸಚಿವಾಲಯ ತಳ್ಳಿಹಾಕಿದೆ.ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾವುದೇ ಸರ್ಕಾರಿೇತರ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ. ಇಂತಹ ಯಾವುದೇ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.ನವೆಂಬರ್ 9ರಂದು ನಡೆಯಲಿರುವ ‘ಉರ್ದು ದಿನಾಚರಣೆ’ ಅಂಗವಾಗಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆದಿದೆ ಎಂಬ ವರದಿಗಳು ಹರಿದಾಡಿದ್ದವು. ಈ ಕುರಿತು ಮಾತನಾಡಿದ್ದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಉರ್ದು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲಾ ಪ್ರಕಾರಗಳನ್ನು ರಾಜ್ಯದ ಎಲ್ಲ ಸಮುದಾಯಗಳಿಗೆ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದ್ದರು.ಆದರೆ, ಕಾರ್ಯಕ್ರಮವನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಸಲಾಗುತ್ತದೆ ಎಂಬ ವರದಿಗಳಿಗೆ ಇದೀಗ ಸಿಎಂ ಕಚೇರಿ ಅಧಿಕೃತ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಿದೆ.











