ಮಂಗಳೂರು: ನಗರದ ಕಾರಾಗೃಹದಲ್ಲಿ 2015ರಲ್ಲಿ ನಡೆದ ಮಾಡೂರು ಯೂಸೂಫ್ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ₹76 ಸಾವಿರ ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಲಿತೇಶ್ ಪೂಜಾರಿ ಅಲಿಯಾಸ್ ಲಿತ್ತು, ಶೋಭರಾಜ್ ಅಲಿಯಾಸ್ ಶೋಭಿ, ಯುವರಾಜ್, ಪ್ರದೀಪ್ ಹಾಗೂ ಉಮೇಶ್ ಕೊಂಬಾರ್ ಅಲಿಯಾಸ್ ಉಮೇಶ್ ಕುಂಬಾರ ಶಿಕ್ಷೆಗೆ ಗುರಿಯಾದವರು. ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ತೀರ್ಪು ಪ್ರಕಟಿಸಿದರು.
2015ರ ನವೆಂಬರ್ 2ರಂದು ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯೂಸೂಫ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಸೇರಿದಂತೆ ಐಪಿಸಿಯ ವಿವಿಧ ಕಲಂಗಳಡಿ ಆರೋಪ ದಾಖಲಿಸಲಾಗಿತ್ತು.
ಅಂದಿನ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ತಿಲಕ್ ಚಂದ್ರ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ಬಿ. ಮೋಹನ್ ಕುಮಾರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.











