ಮಂಗಳೂರು :ಸೆ.30: ಎಂಆರ್‌ಪಿಎಲ್‌ನ 3ನೇ ಹಂತದಲ್ಲಿರುವ ‘ಕೋಕರ್ ಹೈಡ್ರೋಟ್ರೀಟರ್ ಯುನಿಟ್‌’ನಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಮೂರು ಗ್ರಾಮಗಳ 54 ಮನೆಗಳು ಹಾಗೂ 8 ಪ್ರಾರ್ಥನಾ ಕೇಂದ್ರಗಳಿಗೂ ಹಾನಿಯಾಗಿದೆ.ಘಟನೆಯಲ್ಲಿ ರವಿ ಪೂಜಾರಿ, ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ, ಜಗಜೀವನ್ ಸಿಂಗ್, ಶರತ್ ಶೆಟ್ಟಿ ಮತ್ತು ರಾಜೇಶ್ ಪೂಜಾರಿ ಗಾಯಗೊಂಡಿದ್ದಾರೆ. ಎಂಆರ್‌ಪಿಎಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮನೀಶ್ ಕರ್ಕಡ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಏಕಾಏಕಿ ಸ್ಫೋಟ; ಬೆಂಕಿಯ ಜ್ವಾಲೆಮಧ್ಯಾಹ್ನ 12.15ರ ಸುಮಾರಿಗೆ ಎಂಆರ್‌ಪಿಎಲ್‌ನ 3ನೇ ಹಂತದಲ್ಲಿರುವ ಉದ್ಯೋಗಿಗಳಿಗೆ ಊಟೋಪಹಾರ ಹಾಗೂ ನೀರು ಪೂರೈಸುವ ‘ಕೆಆರ್ ಸ್ಟಾರ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ’ಯಲ್ಲಿ ರವಿ ಪೂಜಾರಿ ಕೆಲಸ ಮಾಡುತ್ತಿದ್ದ ವೇಳೆ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.ಸ್ಫೋಟದ ತೀವ್ರತೆಗೆ ಯಂತ್ರೋಪಕರಣಗಳು ಹಾಗೂ ಬಿಡಿಭಾಗಗಳು ಛಿದ್ರಗೊಂಡು ಬೆಂಕಿಯ ಜ್ವಾಲೆಯೊಂದಿಗೆ ಸುತ್ತಮುತ್ತ ಚಿಮ್ಮಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ರಾಜೇಶ್ ಮತ್ತು ಮನೀಶ್ ಕರ್ಕಡ ಅವರಿಗೆ ಗಂಭೀರ ಗಾಯಗಳಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.ನಿರ್ಲಕ್ಷ್ಯದ ಆರೋಪ; ಎಫ್‌ಐಆರ್ಘಟಕದ ಮುಖ್ಯಸ್ಥರು ಹಾಗೂ ಎಂಆರ್‌ಪಿಎಲ್ ಸಂಸ್ಥೆಯ ಮುಖ್ಯಸ್ಥರು ನಿರ್ಲಕ್ಷ್ಯ ವಹಿಸಿದ್ದರಿಂದಲೇ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿ ರವಿ ಪೂಜಾರಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.54 ಮನೆ, 8 ಪ್ರಾರ್ಥನಾ ಕೇಂದ್ರಗಳಿಗೆ ಹಾನಿಸ್ಫೋಟದ ಪರಿಣಾಮ ಜೋಕಟ್ಟೆ, ಕಳವಾರು ಮತ್ತು ಬಾಳ ಗ್ರಾಮಗಳಲ್ಲಿ ಒಟ್ಟು 54 ಮನೆಗಳಿಗೆ ಹಾನಿಯಾಗಿದೆ ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ.ಜೋಕಟ್ಟೆ ಗ್ರಾಮದ 25, ಕಳವಾರು ಗ್ರಾಮದ 19 ಹಾಗೂ ಬಾಳ ಗ್ರಾಮದ 10 ಮನೆಗಳಿಗೆ ಹಾನಿಯಾಗಿದೆ. ಇದರೊಂದಿಗೆ ಜೋಕಟ್ಟೆಯ 5 ಹಾಗೂ ಕಳವಾರುವಿನ 3 ಪ್ರಾರ್ಥನಾ ಕೇಂದ್ರಗಳು ಸೇರಿದಂತೆ ಒಟ್ಟು 8 ಪ್ರಾರ್ಥನಾ ಕೇಂದ್ರಗಳಿಗೂ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!