ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ಕೋತಿಯಂತೆ ಏರುವ ಮೂಲಕ ‘ಮಂಕಿಮ್ಯಾನ್’ ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಅವರು ಚಳ್ಳಕೆರೆಯ ನಿವೇದಿತಾ ಅವರೊಂದಿಗೆ ಆಗಸ್ಟ್ 23ರಂದು ಹಸೆಮಣೆ ಏರಲಿದ್ದಾರೆ.ಪದವೀಧರೆಯಾಗಿರುವ ನಿವೇದಿತಾ ಅವರೊಂದಿಗೆ ಜ್ಯೋತಿರಾಜ್ ಅವರ ವಿವಾಹವು ಚಿತ್ರದುರ್ಗದ ವೈಭವ್ ಗಾರ್ಡನ್‌ನಲ್ಲಿ ನಡೆಯಲಿದೆ. ಈ ಕುರಿತು ಜ್ಯೋತಿರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡು, ಕರ್ನಾಟಕದ ಜನತೆ ತಮ್ಮ ಜೋಡಿಗೆ ಆಶೀರ್ವಾದ ನೀಡುವಂತೆ ಮನವಿ ಮಾಡಿದ್ದಾರೆ.‘ಬರುವ 23 ಹಾಗೂ 24ರಂದು ನನ್ನ ಮದುವೆ ಇದೆ. ಕರ್ನಾಟಕದ ಜನತೆ ನಮಗೆ ಆಶೀರ್ವಾದ ಮಾಡಿ. ನಾನು ನಂಬಿದ ದೈವ ಅಮ್ಮ ಏಕನಾಥೇಶ್ವರಿ, ಆಕೆ ಕುಣಿಸಿದಂತೆ ಕುಣಿಯುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.ಜ್ಯೋತಿರಾಜ್ ಅವರ ಕುಟುಂಬಸ್ಥರು ತಮಿಳುನಾಡಿನಲ್ಲಿ ಮದುವೆ ನಡೆಸಲು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ, ‘ನಾನು ಕರ್ನಾಟಕದಲ್ಲಿ ಬೆಳೆದ ಕನ್ನಡಿಗ. ನನ್ನ ಸಾಧನೆಗೆ ಹೆಗಲು ನೀಡಿದ ಕೋಟೆಗಳ ನಗರಿ ಚಿತ್ರದುರ್ಗದಲ್ಲೇ ಮದುವೆಯಾಗುತ್ತೇನೆ’ ಎಂದು ಕುಟುಂಬಸ್ಥರನ್ನು ಒಪ್ಪಿಸಿ ಚಿತ್ರದುರ್ಗದಲ್ಲೇ ವಿವಾಹವಾಗುತ್ತಿದ್ದಾರೆ.ಜ್ಯೋತಿರಾಜ್ ಅವರ ವಿವಾಹದ ಸುದ್ದಿ ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!