ಪುತ್ತೂರು: ದೇವಸ್ಥಾನಗಳು ಎಲ್ಲ ಹಿಂದೂಗಳ ಸೊತ್ತಾಗಿದ್ದು, ಭಕ್ತ ಸಂಸ್ಕೃತಿಯ ಕೇಂದ್ರಗಳಾಗಿವೆ. ಆದರೆ 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ದೇವಸ್ಥಾನಗಳಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಧಾರ್ಮಿಕ ಮುಖಂಡ ಮುರಳೀಕೃಷ್ಣ ಹಸಂತಡ್ಕ ಆರೋಪಿಸಿದರು.ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಪುತ್ತೂರು ಬಿಜೆಪಿ ವತಿಯಿಂದ ಧಾರ್ಮಿಕ ಕ್ಷೇತ್ರಗಳಲ್ಲಿನ ಭ್ರಷ್ಟಾಚಾರ ಹಾಗೂ ರಾಜಕೀಯ ಹಸ್ತಕ್ಷೇಪ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಅರಸರ ಆಡಳಿತದ ಕಾಲದಲ್ಲಿದ್ದ ರೀತಿಯಲ್ಲಿ ದೇವಸ್ಥಾನದ ಆಡಳಿತ ನಡೆಯುತ್ತಿದ್ದು, ಲೆಕ್ಕಾಚಾರದಲ್ಲಿ ಪಾರದರ್ಶಕತೆ ಇಲ್ಲದೆ ಭಕ್ತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಸಾವಿರಾರು ಭಕ್ತರು ಸ್ವಯಂಸೇವೆಯ ಮೂಲಕ ಕೈಗೊಳ್ಳುವ ಕಾರ್ಯವೇ ಧಾರ್ಮಿಕ ಕ್ಷೇತ್ರದ ನಿಜವಾದ ಅಭಿವೃದ್ಧಿಯಾಗಿದೆ. ಬೆಂಗಳೂರಿನವರ ಹಣದಲ್ಲಿ ಮಾಡುವ ಕಾಮಗಾರಿಯನ್ನು ಅಭಿವೃದ್ಧಿ ಎಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.ಸೀಮಾ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಮನೆದೇವರ ವ್ಯವಸ್ಥೆಯಂತೆ ನಡೆದುಕೊಳ್ಳುತ್ತಿದೆ. ಸ್ವಂತ ಹಕ್ಕಿನ ಜಾಗದಲ್ಲಿ ಕೆಲಸ ಮಾಡುವ ರೀತಿಯಲ್ಲಿ ಎ ಗ್ರೇಡ್ ದೇವಸ್ಥಾನದಲ್ಲೂ ನಡೆದುಕೊಳ್ಳಲಾಗುತ್ತಿದೆ ಎಂದು ದೂರಿದರು.ಆರಾಧ್ಯ ಮೂರ್ತಿಯ ವಿಚಾರವನ್ನು ರಸ್ತೆಗೆ ತರಬಾರದು ಎಂಬ ಕಾರಣಕ್ಕೆ ಈವರೆಗೆ ಮೌನವಾಗಿದ್ದೆವು. ದೇವಸ್ಥಾನ ಹಾಗೂ ಧರ್ಮದ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂಬ ಕಾರಣಕ್ಕೂ ಸುಮ್ಮನಿದ್ದೆವು. ಇದೀಗ ಅವ್ಯವಹಾರ ಮತ್ತು ರಾಜಕೀಯ ಹಸ್ತಕ್ಷೇಪದ ವಿರುದ್ಧ ಹೋರಾಟ ನಡೆಸಲು ಭಾರತೀಯ ಜನತಾ ಪಕ್ಷ ಮತ್ತೆ ಎದ್ದು ನಿಂತಿದೆ. ವೈಯಕ್ತಿಕ ಟೀಕೆಗಳಿಗೆ ಪ್ರತಿಕ್ರಿಯಿಸುವ ತಾಕತ್ತು ನಮಗೂ ಇದೆ ಎಂದು ಹೇಳಿದರು.ಪ್ರತಿಭಟನೆಯ ಬಳಿಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರಿಗೆ ಸಹಾಯಕ ಆಯುಕ್ತರ ಮೂಲಕ ದೂರು ಸಲ್ಲಿಸಲಾಯಿತು. ಕಂದಾಯ ಇಲಾಖೆಯ ಸುಲೋಚನ ಅವರು ದೂರು ಸ್ವೀಕರಿಸಿದರು.ಮಾಜಿ ಶಾಸಕ ಸಂಜೀವ ಮಠಂದೂರು, ಮುಖಂಡರಾದ ಶಿವಕುಮಾರ್, ಪ್ರಸನ್ನ ಮಾರ್ತ ಮತ್ತಿತರರು ಉಪಸ್ಥಿತರಿದ್ದರು. ಸುನಿಲ್ ದಡ್ಡು ಸ್ವಾಗತಿಸಿದರು. ದಯಾನಂದ ಶೆಟ್ಟಿ ಪ್ರಸ್ತಾವನೆಗೈದರು. ಲೋಕೇಶ್ ಚಾಕೊಟೆ ದೂರಿನ ಪ್ರತಿಯನ್ನು ಓದಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!