ಬಿಜೆಪಿಯ(BJP) ಆಂತರಿಕ ವಲಯದಲ್ಲಿ ಈಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಕೇಂದ್ರ ಸಚಿವ ವಿ. ಸೋಮಣ್ಣ(V.Somanna) ಅವರು ನವದೆಹಲಿಯಲ್ಲಿ(Delhi) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್(Nitin Nabin) ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ(Politics) ಸಂಚಲನ ಮೂಡಿಸಿದೆ.
ರಾಜ್ಯದಲ್ಲಿ ನಾಯಕತ್ವ ಬದವಾವಣೆ ಚರ್ಚೆಯ ನಡುವೆಯೇ ಸೋಮಣ್ಣ ಅವರ ಈ ಭೇಟಿ ಕುತೂಹಲ ಮೂಡಿಸಿದೆ.
ರಾಷ್ಟ್ರಾಧ್ಯಕ್ಷರನ್ನು ಖುದ್ದಾಗಿ ಭೇಟಿ ಮಾಡಿದ ಸೋಮಣ್ಣ ಅವರು, ಸಾಂಪ್ರದಾಯಿಕ ಮೈಸೂರು ಪೇಟ ಧರಿಸಿ, ಶಲ್ಯ ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದರು.
ಅಶೋಕ್, ವಿಜಯೇಂದ್ರ ಬೆನ್ನಲ್ಲೇ ಸೋಮಣ್ಣ ಭೇಟಿ
ವಿಧಾನಪರಿಷತ್ ಚುನಾವಣೆಯ ವೇಳೆ ನಡೆದಿದೆ ಎನ್ನಲಾದ ಅಡ್ಡಮತದಾನದ (ಕ್ರಾಸ್ ವೋಟಿಂಗ್) ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ದೆಹಲಿ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಈಗ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಭೇಟಿಯ ವೇಳೆ ರಾಜ್ಯ ರಾಜಕಾರಣದ ಸದ್ಯದ ವಿದ್ಯಮಾನಗಳು, ಪಕ್ಷದ ಶಿಸ್ತು ಉಲ್ಲಂಘನೆ ಮತ್ತು ರಾಜ್ಯ ನಾಯಕತ್ವದ ಬದಲಾವಣೆ ಸೇರಿದಂತೆ ಹಲವು ಪ್ರಮುಖ ಹಾಗೂ ಸೂಕ್ಷ್ಮ ವಿಚಾರಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಬಿಜೆಪಿಯಲ್ಲಿ ತಾರಕಕ್ಕೆ ಏರಿದ ನಾಯಕತ್ವ ಬದಲಾವಣೆ ಚರ್ಚೆ
ವಿಶೇಷವೆಂದರೆ, ಕಳೆದ ಕೆಲವು ದಿನಗಳಿಂದ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಕುರಿತು ಪಕ್ಷದ ಆಂತರಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ಕೇಳಿಬರುತ್ತಿವೆ. ಪ್ರಸ್ತುತ ಹೊಸ ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ವಿ. ಸೋಮಣ್ಣ ಅವರ ಈ ಹಠಾತ್ ದೆಹಲಿ ಪ್ರವಾಸ ಮತ್ತು ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರೊಂದಿಗಿನ ಭೇಟಿಯು, ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ನಡೆಯಲಿವೆ ಎಂಬ ಮುನ್ಸೂಚನೆಯನ್ನು ದಟ್ಟವಾಗಿಸಿದೆ.







