ಪುತ್ತೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತು ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿರುವ ನಡುವೆಯೇ ಪುತ್ತೂರು ಶಾಸಕ ಅಶೋಕ್ ರೈ ಅವರ ಹೆಸರು ಮತ್ತೆ ಸಚಿವ ಸ್ಥಾನಕ್ಕೆ ಸಂಬಂಧಿಸಿ ಚರ್ಚೆಗೆ ಬಂದಿದೆ.
ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಅಶೋಕ್ ರೈ ಅವರಿಗೆ ಸಚಿವ ಸ್ಥಾನ ದೊರೆಯಬಹುದು ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಮೊದಲ ಹಂತದ ಸಚಿವರ ಪಟ್ಟಿಯಲ್ಲಿಯೇ ಅವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯೂ ಬೆಂಬಲಿಗರಲ್ಲಿ ಇತ್ತು. ಆದರೆ ಆ ವೇಳೆ ಅವಕಾಶ ದೊರೆಯಲಿಲ್ಲ.
ಈಗ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಅಶೋಕ್ ರೈ ಅವರಿಗೆ ದೆಹಲಿಯಿಂದ ಬುಲಾವ್ ಬಂದಿರುವ ಮಾಹಿತಿ ಲಭ್ಯವಾಗಿದೆ. ಇದರ ಹಿನ್ನೆಲೆಯಲ್ಲಿ ಅವರು ಶುಕ್ರವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳಲಿದ್ದು, ಅಶೋಕ್ ರೈ ಅವರಿಗೆ ಸಚಿವ ಸ್ಥಾನ ದೊರೆಯುತ್ತದೆಯೇ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಈ ಬಾರಿ ಅವರಿಗೆ ಅವಕಾಶ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.
ಅಶೋಕ್ ರೈ ಸಚಿವರಾಗುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿದ್ದು, ಅಧಿಕೃತ ಘೋಷಣೆ ಹೊರಬೀಳುವವರೆಗೆ ನಿರೀಕ್ಷೆ ಮುಂದುವರಿದಿದೆ.







