ಆಯಪ್‌ಗಳ ಮೂಲಕ ಸಲಿಂಗ ಸಂಬಂಧದ ಆಮಿಷವೊಡ್ಡಿ ಯುವಕರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ದರೋಡೆ ಮಾಡುತ್ತಿದ್ದ ಭೀಕರ ಗ್ಯಾಂಗ್ ಒಂದನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಈ ಪ್ರಕರಣದಲ್ಲಿ ಒಟ್ಟು ಆರು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.ಬಂಧಿತರು ಯಾರು?ಆನೇಕಲ್ ಮೂಲದ ವಿಶಾಲ್ (18), ಅಜಯ್ (19), ಸೂರ್ಯ (19) ಹಾಗೂ ಸಂಜಯ್ (22) ಬಂಧಿತ ಪ್ರಮುಖ ಆರೋಪಿಗಳು. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನೂ ವಶಕ್ಕೆ ಪಡೆಯಲಾಗಿದ್ದು, ಅವರನ್ನು ಬಾಲ ನ್ಯಾಯ ಮಂಡಳಿಗೆ (Juvenile Justice Board) ಹಾಜರುಪಡಿಸಲಾಗಿದೆ.ಈ ಗ್ಯಾಂಗ್ ಅತ್ಯಂತ ವ್ಯವಸ್ಥಿತವಾಗಿ ದರೋಡೆಗೆ ಸಂಚು ರೂಪಿಸುತ್ತಿತ್ತು. ಆರೋಪಿಗಳು ಪ್ರಸಿದ್ಧ ಡೇಟಿಂಗ್ ಆಯಪ್‌ಗಳಲ್ಲಿ ಸುಂದರ ಯುವಕರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆಯುತ್ತಿದ್ದರು. ಸಲಿಂಗ ಸಂಬಂಧದಲ್ಲಿ ಆಸಕ್ತಿಯಿರುವ ಯುವಕರನ್ನು ಗುರುತಿಸಿ, ಅವರೊಂದಿಗೆ ಕೆಲವು ದಿನಗಳ ಕಾಲ ಸ್ನೇಹ ಬೆಳೆಸಿ ನಂಬಿಕೆ ಗಳಿಸುತ್ತಿದ್ದರು. ವಿಶ್ವಾಸ ಗಳಿಸಿದ ನಂತರ ಸಲಿಂಗ ಸುಖದ ಆಮಿಷವೊಡ್ಡಿ ಆನೇಕಲ್ ಹಾಗೂ ಜಿಗಣಿ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಿಗೆ ಯುವಕರನ್ನು ಕರೆಸಿಕೊಳ್ಳುತ್ತಿದ್ದರು.ಯುವಕರು ಸ್ಥಳಕ್ಕೆ ಬರುತ್ತಿದ್ದಂತೆಯೇ ಗ್ಯಾಂಗ್‌ನಲ್ಲಿದ್ದ ಎಲ್ಲರೂ ಸುತ್ತುವರಿದು ಹಲ್ಲೆ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ, ಯುವಕರನ್ನು ಬೆತ್ತಲೆಗೊಳಿಸಿ ಅವರ ಬಳಿಯಿದ್ದ ಹಣ, ಮೊಬೈಲ್ ಮತ್ತು ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದರು.ಬೆಳಕಿಗೆ ಬಂದಿದ್ದು ಹೇಗೆ?ಈ ಗ್ಯಾಂಗ್‌ನಿಂದ ಲೂಟಿಗೊಳಗಾದ ಯುವಕನೊಬ್ಬ ಜಿಗಣಿ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ಜಿಗಣಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿದ್ದಾರೆ. ಡೇಟಿಂಗ್ ಆಯಪ್‌ಗಳ ಮೂಲಕ ಅಪರಿಚಿತರನ್ನು ಭೇಟಿಯಾಗುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ. ಸೈಬರ್ ಕ್ರೈಂ ಮತ್ತು ಈ ರೀತಿಯ ಹನಿಟ್ರಾಪ್ ದರೋಡೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ.








