ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಮಳೆ ಅನಾಹುತಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ತಾಲೂಕು ಆಡಳಿತಗಳು ಪೂರ್ಣ ಸನ್ನದ್ಧವಾಗಿರಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದರು.ಭಾನುವಾರ ಅಧಿಕಾರಿಗಳೊಂದಿಗೆ ಆನ್‌ಲೈನ್ ಸಭೆ ನಡೆಸಿದ ಅವರು, ಎಲ್ಲಾ ತಾಲೂಕುಗಳ ನಿಯಂತ್ರಣ ಕೊಠಡಿಗಳು 24 ಗಂಟೆಯೂ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಅಗತ್ಯ ನೆರವು ಒದಗಿಸುವಂತೆ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಗುಡ್ಡ ಕುಸಿತ ಹಾಗೂ ಮಣ್ಣು ಜರಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಈಗಾಗಲೇ ಗುರುತಿಸಿರುವ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ನಿಗಾ ಇರಿಸಬೇಕು. ಅಗತ್ಯವಿದ್ದಲ್ಲಿ ಅಪಾಯದ ಮನೆಗಳ ನಿವಾಸಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಮಣ್ಣು ಜರಿಯುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮರಳು ಚೀಲ ಅಳವಡಿಸಿ ತಾತ್ಕಾಲಿಕ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದರು.ಪ್ರಾಕೃತಿಕ ವಿಕೋಪದಿಂದ ಮೃತಪಟ್ಟವರ ಕುಟುಂಬಗಳಿಗೆ 24 ಗಂಟೆಯೊಳಗೆ ಪರಿಹಾರದ ಚೆಕ್ ವಿತರಿಸಬೇಕು. ಸ್ಥಳಾಂತರಗೊಂಡವರಿಗೆ ಅಗತ್ಯ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು. ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಸದಾ ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಸೂಚಿಸಿದರು.ಚಾರ್ಮಾಡಿ, ಸಂಪಾಜೆ ಹಾಗೂ ಶಿರಾಡಿ ಘಾಟ್‌ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಭೂಕುಸಿತ ಅಥವಾ ಗುಡ್ಡ ಜರಿತ ಸಂಭವಿಸಿದರೆ ತಕ್ಷಣ ತೆರವು ಕಾರ್ಯಾಚರಣೆ ನಡೆಸಲು ಅಗತ್ಯ ಯಂತ್ರೋಪಕರಣಗಳನ್ನು ಸಿದ್ಧವಾಗಿಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದುವರೆಗೆ ಜಿಲ್ಲೆಯಲ್ಲಿ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳುವಂತಹ ಯಾವುದೇ ಘಟನೆ ವರದಿಯಾಗಿಲ್ಲ ಎಂದು ಅವರು ಹೇಳಿದರು.ಇನ್ನೊಂದೆಡೆ, ಭಾರತೀಯ ಹವಾಮಾನ ಇಲಾಖೆ ಭಾನುವಾರವೂ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಕೇಂದ್ರ ಹವಾಮಾನ ಇಲಾಖೆಯ ಫ್ಲ್ಯಾಶ್ ಫ್ಲಡ್ ಗೈಡೆನ್ಸ್ ಸೆಲ್ ಮಾಹಿತಿ ಪ್ರಕಾರ ಆಗಸ್ಟ್‌ 2ರ ಬೆಳಿಗ್ಗೆ 11.30ರವರೆಗೆ ನದಿ ಪಾತ್ರ ಹಾಗೂ ಜಲಾನಯನ ಪ್ರದೇಶಗಳಲ್ಲಿ ಸಾಧಾರಣ ಆಕಸ್ಮಿಕ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರವಾಡೆ ವಿನಾಯಕ ಕಾರಭಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!