ಚರ್ಚ್ ರಸ್ತೆಯ ಸಮೀಪ ಗುರುವಾರ ತಡರಾತ್ರಿ ನಡು ರಸ್ತೆಯಲ್ಲಿಯೇ ಗುಂಡಿನ ದಾಳಿ ನಡೆಸಿ ರಿಚರ್ಡ್ ಮಸ್ಕರೇನಸ್ ಹತ್ಯೆ ಪ್ರಕರಣದ ಆರೋಪಿ ಡೆರಿಕ್ ಕ್ರಾಸ್ತಾನನ್ನು ಪೊಲೀಸರು ಶನಿವಾರ ಭಟ್ಕಳದಲ್ಲಿ ಬಂಧಿಸಿದ್ದಾರೆ. ಡೆರಿಕ್ ಕ್ರಾಸ್ತಾನ ಪತ್ತೆಗಾಗಿ ಉಡುಪಿ ಜಿಲ್ಲಾ ಪೊಲೀಸರು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು.ಕಾರ್ಯಾಚರಣೆ ವೇಳೆ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಹೇರಬುಡಿಕೆ ಪ್ರದೇಶದಲ್ಲಿ ಅಡಗಿದ್ದ ಡೆರಿಕ್ ಕ್ರಾಸ್ತಾನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರಿರಾಂ ಶಂಕರ್ ತಿಳಿಸಿದ್ದಾರೆ.ಕೊಲೆಯಾದ ಐವನ್ ರಿಚರ್ಡ್ ಮಸ್ಕರೇನಸ್ (45) ಹೆಬ್ರಿಯ ಸಂತೆಕಟ್ಟೆ ಮೂಲದವರಾಗಿದ್ದು ಪ್ರಸ್ತುತ ಬಾರ್ಕೂರು ಕಚ್ಚೂರಿನಲ್ಲಿ ಬಾಡಿಗೆ ಮನೆ ನಿವಾಸಿಯಾಗಿದ್ದರು. ಕೊಲೆ ಆರೋಪಿ ಡೆರಿಕ್ ಕ್ರಾಸ್ತಾ (54) ಹೆಮ್ಮಾಡಿ ಕನ್ನಡಕುದ್ರು ಮೂಲದ,ಪ್ರಸ್ತುತ ಕುಂದಾಪುರದ ಫ್ಲ್ಯಾಟ್ ಒಂದರಲ್ಲಿ ವಾಸ್ತವ್ಯವಿದ್ದ. ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಐವನ್ ಹಾಗೂ ಡೆರಿಕ್ ನಡುವೆ ಹಣಕಾಸು ಹಾಗೂ ಇತರ ವ್ಯವಹಾರ ವಿಷಯದಲ್ಲಿ ಇರುವ ಮನಸ್ತಾಪದಿಂದ ಕೊಲೆ ಆಗಿರಬೇಕು ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.ಘಟನೆಯ ವಿವರಗುರುವಾರ ರಾತ್ರಿ 11.45ರ ವೇಳೆಗೆ ಐವನ್ ಅವರಿಗೆ ಆರೋಪಿ ಡೆರಿಕ್ ಕರೆ ಮಾಡಿ ಸಿಗಡಿ ಕೊಡುವ ವಿಷಯದಲ್ಲಿ ದೂರವಾಣಿಯಲ್ಲಿ ಜೋರಾಗಿ ಮಾತುಕತೆ ನಡೆಸಿದ್ದ. ಮಾತು ವಿಕೋಪಕ್ಕೆ ತಿರುಗಿ, ಡೆರಿಕ್ ಐವನ್‌ಗೆ, ‘ಧಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ’ ಎಂದು ಕರೆದಿದ್ದ. ಗುರುವಾರ ತಡರಾತ್ರಿ 1.30 ಗಂಟೆಗೆ ಬಾರ್ಕೂರಿನಿಂದ ಹೊರಟು, ಕುಂದಾಪುರಕ್ಕೆ ಬಂದಿದ್ದ ಐವನ್, ಡೆರಿಕ್‌ನ ಮೊಬೈಲ್‌ಗೆ ಲೋಕೇಶನ್ ಕಳುಹಿಸಿದ್ದರು. ಲೋಕೇಶನ್ ಇರುವ ಚರ್ಚ್ ರಸ್ತೆಗೆ ತಾಗಿಕೊಂಡಿರುವ ಕಾಂಕ್ರೀಟ್ ರಸ್ತೆಯಲ್ಲಿ ಅವರು ಕಾರನ್ನು ನಿಲ್ಲಿಸಿಕೊಂಡಿದ್ದರು. ಬೆಳಗ್ಗಿನ ಜಾವ 3.15ರ ವೇಳೆಗೆ ಕಾರಿನಲ್ಲಿ ಬಂದ ಡೆರಿಕ್, ಐವನ್ ಇದ್ದ ಕಾರಿನ ಎದುರು ತನ್ನ ಕಾರು ನಿಲ್ಲಿಸಿ, ಕೆಳಗೆ ಇಳಿದು ಬಂದು, ಐವನ್ ಕಾರಿನಿಂದ ಇಳಿಯುತ್ತಿದ್ದಂತೆ ತಾನು ತಂದಿದ್ದ ಬಂದೂಕಿನಿಂದ ಐವನ್ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ಐವನ್ ಸೊಂಟ ಹಾಗೂ ಕಾಲಿನ ಭಾಗದಲ್ಲಿ ಉಂಟಾದ ಗಾಯದಿಂದ ತೀವ್ರ ರಕ್ತಸ್ರಾವವಾಗಿ ರಸ್ತೆಯಲ್ಲೆ ಕುಸಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಗುಂಡು ಹಾರಿಸಿದ ಬಳಿಕ ಮತ್ತೆ ಕಾರು ಏರಿದ ಡೆರಿಕ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಸ್ಥಳದಿಂದ ಪರಾರಿ ಯಾಗಿದ್ದ.









